Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label Festival. Show all posts
Showing posts with label Festival. Show all posts

October 1, 2014

Ayudha Pooja / Maha Navami / Vijaya Dashami / ಮಹಾನವಮಿ / ಆಯುಧ ಪೂಜೆ / ವಿಜಯದಶಮಿ

ಮಹಾ ನವಮಿ ಅಥವಾ ಆಯುಧ ಪೂಜೆ ಹಬ್ಬವನ್ನು ನವರಾತ್ರಿಯ ಒಂಭತ್ತನೆ ದಿನ ಆಚರಿಸುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಈ ದಿನ ಹೆಸರೇ ಹೇಳುವಂತೆ ಆಯುಧಗಳಿಗೆ ಪೂಜೆ ಮಾಡುವ ದಿನ. ಹಿಂದೆ ಮೈಸೂರಿನ ಮಹಾರಾಜರು ಮಹಾನವಮಿಯ ದಿನ ಎಲ್ಲಾ ಆಯುಧಗಳನ್ನು, ತಮ್ಮ ಪಟ್ಟದ ಕತ್ತಿಯನ್ನೂ ಸಹ ತೆಗೆದಿಟ್ಟು ಪೂಜೆ ಮಾಡುತ್ತಿದ್ದರು. ಈ ದಿನ ಅವುಗಳಿಗೆ ವಿರಾಮ/ವಿಶ್ರಾಂತಿ/ರಜಾ ದಿನ. ಈ ಆಯುಧಗಳು ನಮ್ಮನ್ನು ವರುಷವೆಲ್ಲ ಕಾಪಾಡಿವೆ. ಈ ಒಂದು ದಿನ ಅವುಗಳಿಗೆ ವಿರಾಮ ಕೊಟ್ಟು, ಅವುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷವೂ ಹೀಗೆ ನಮ್ಮನ್ನು ಕಾಪಾಡಿ ಎಂದು ಅವುಗಳಿಗೆ ಪೂಜೆ ಮಾಡುತ್ತಿದ್ದರು. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ.

ಈಗಿನ ಕಾಲದಲ್ಲಿ ಮನೆಗಳಲ್ಲಿ ದಿನ ನಿತ್ಯ ಉಪಯೋಗಿಸುವ ಆಯುಧಗಳು, ವಾಹನಗಳಿಗೆಲ್ಲ ಪೂಜೆ ಮಾಡುತ್ತಾರೆ. ಕಾರ್ಖಾನೆ,ಉದ್ದಿಮೆ, ಕಛೇರಿ ಎಲ್ಲಾ ಕಡೆ ಅಲ್ಲಿ ಉಪಯೋಗಿಸುವ ಯಂತ್ರಗಳೂ, ಉಪಕರಣಗಳಿಗೆ ಪೂಜೆ ಮಾಡುತ್ತಾರೆ, ಅವುಗಳನ್ನು ಈ ದಿನ ಉಪಯೊಗಿಸುವುದಿಲ್ಲ.

ಆಯುಧ ಪೂಜೆ 

ಈ ದಿನ ದೇವರ ಪೂಜೆಯ ಜೊತೆ ಆಯುಧಗಳಿಗೂ ಪೂಜೆ ಮಾಡಬೇಕು. ಮನೆಯಲ್ಲಿ ದಿನ ನಿತ್ಯ ಉಪಯೋಗಿಸುವ ಆಯುಧಗಳು(ಚಾಕು,ಕತ್ತರಿ,ಇತ್ಯಾದಿ),ಯಂತ್ರೋಪಕರಣಗಳು/ಸಲಕರಣೆಗಳು (gadgets/machines - ಟಿ.ವಿ, ಕಂಪ್ಯೂಟರ್, ಒಲೆ, ಫ್ರಿಡ್ಜ್, ಇತ್ಯಾದಿ), ಮತ್ತು ವಾಹನಗಳು (ಕಾರ್, ಸ್ಕೂಟರ್, ಸೈಕಲ್, ಇತ್ಯಾದಿ) - ಇವುಗಳನ್ನೆಲ್ಲ ಸ್ವಚ್ಛ ಮಾಡಿ ( ಒದ್ದೆ ಬಟ್ಟೆಯಿಂದ ಒರಸಿ/ನೀರಿನಿಂದ ತೊಳೆಯಿರಿ), ಅರಿಶಿನ ಕುಂಕುಮ ಹಚ್ಚಿ, ಹೂವು, ಗೆಜ್ಜೆವಸ್ತ್ರ ಹಾಕಿ, ಊದಿನ ಕಡ್ಡಿ ಹಚ್ಚಿ, ಮಂಗಳಾರತಿ ಮಾಡಿ. ನಾವು ವರ್ಷವೆಲ್ಲಾ ಈ ಉಪಕರಣಗಳಿಂದ ಉಪಯೋಗ ಪಡೆದಿರುತ್ತೇವೆ, ಇವತ್ತು ಅವುಗಳಿಗೆ, ಕೃತಜ್ಞತಾ ಭಾವದಿಂದ ಪೂಜೆ ಮಾಡಿ, ಮುಂದೆಯೂ ನಮಗೆ ಸಹಾಯ ಮಾಡಿ ಎಂದು ಪ್ರಾರ್ಥಿಸಿ.

ವಿಜಯ ದಶಮಿ
ನವರಾತ್ರಿಯ ಹತ್ತನೆಯ ದಿನ ವಿಜಯದಶಮಿ ಹಬ್ಬ. ಆಶ್ವಯುಜ ಮಾಸದ ಶುಕ್ಲ ಪಕ್ಷದ ದಶಮಿ ದಿನ. ಇದು ನವರಾತ್ರಿ ಹಬ್ಬದ ಕೊನೆಯ ದಿನ. ಈ ದಿನ ವಿಶೇಷತೆ ಶಮೀ ಪೂಜೆ. ಶಮೀ ವೃಕ್ಷಕ್ಕೆ ಬನ್ನಿ ಮರ ಅಂತ ಕರೆಯುತ್ತಾರೆ.(biological name: Prosopis cineraria) ಈ ಹಬ್ಬದ ಮಹತ್ವದ ಹಿಂದೆ ಕೆಲವು ಪುರಾಣ ಕಥೆಗಳಿವೆ.
ಬನ್ನಿ ಮರ
(photos taken from hereherehere and here.)

ಮಹಾಭಾರತದಲ್ಲಿ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವ ಮುನ್ನ ಶಮೀ ವೃಕ್ಷದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋದರು. ಒಂದು ವರ್ಷದ ಅಜ್ಞಾತ ವಾಸದ ನಂತರ ಬಚ್ಚಿಟ್ಟಿದ್ದ ಆಯುಧಗಳು ಶಮೀ ವೃಕ್ಷದಲ್ಲೇ ಜೋಪಾನವಾಗಿ ಇದ್ದವು. ತಮ್ಮ ಆಯುಧಗಳನ್ನು ಕಾಪಾಡಿದ ಶಮೀ ಮರಕ್ಕೆ ನಮಸ್ಕರಿಸಿ, ಕೌರವರ ಮೇಲೆ ಯುದ್ಧ ಮಾಡಲು ಹೋದರು ಮತ್ತು ಯುದ್ಧದಲ್ಲಿ ವಿಜಯ ಸಾಧಿಸಿದರು. ಆದ್ದರಿಂದ ವಿಜಯ ದಶಮಿಯ ದಿನ ಶಮೀ ಪೂಜೆ ಮಾಡುತ್ತರೆ, ಆ ದಿನ ಮಾಡಿದ ಎಲ್ಲಾ ಕಾರ್ಯಗಳಲ್ಲೂ ವಿಜಯ ದೊರಕುವುದು ಎಂಬ ನಂಬಿಕೆ.

ತ್ರೇತಾಯುಗದಲ್ಲಿ ಕೌಸ್ತ ಎಂಬ ವಿದ್ಯಾರ್ಥಿಯು ವಿದ್ಯಾಭ್ಯಾಸದ ನಂತರ ತನ್ನ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸಿದನು. ಆಗ ಗುರು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳಿದನು. ಅಷ್ಟೊಂದು ನಾಣ್ಯವನ್ನು ಹೇಗೆ ಹೊಂದಿಸಲಿ ಎಂದು ಚಿಂತಿಸುತ್ತ ಕೌಸ್ತನು ರಘು ರಾಜನ ಬಳಿ ಬಂದನು. ರಾಜನು ಕುಬೇರನಿಗೆ ಪ್ರಾರ್ಥನೆ ಮಾಡಲು, ಶಮೀ ಮರದ ಒಂದೊಂದು ಎಲೆಯೂ ಚಿನ್ನದ ನಾಣ್ಯವಾದವು. ಕೌಸ್ತನು ಸಂತಸದಿಂದ ನಾಣ್ಯಗಳನ್ನು ತೆಗೆದುಕೊಂಡು ಗುರುಗಳಿಗೆ ಗುರುದಕ್ಷಿಣೆ ಅರ್ಪಿಸಿದನು. ಉಳಿದ ನಾಣ್ಯಗಳನ್ನು ದಾನ ಮಾಡಿದನು ಎಂಬ ಕಥೆಯಿದೆ. ಹೀಗಾಗಿ ಶಮೀ ಪತ್ರೆಯು ಚಿನ್ನ/ನಿಧಿಯೆಂಬ ನಂಬಿಕೆ ಇದೆ.

ಶಮೀ ಪೂಜೆ ಮಾಡುವಾಗ ಕೆಳಗಿನ ಮಂತ್ರವನ್ನು ಹೇಳಬೇಕು.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರಿತ್ವಂ ಭವ ಶ್ರೀರಾಮಪೂಜಿತಾ ||


ಪೂಜೆಯ ನಂತರ ಶಮೀ ಎಲೆಗಳನ್ನು ಬಂಧುಗಳು - ಸ್ನೇಹಿತರ ಜೊತೆ ಹಂಚಿಕೊಳ್ಳುವ ಪ್ರತಿತಿ ಇದೆ. ಈ ಎಲೆಗಳನ್ನು ಎಲ್ಲಿ ಇಟ್ಟರೂ ಅಲ್ಲಿ ಹೊನ್ನಾಗುವುದು ಎನ್ನುತಾರೆ. ಮನೆಯಲ್ಲಿ ದುಡ್ಡು/ಆಭರಣ ಇಡುವ ಕಪಾಟಿನಲ್ಲಿ (locker/safe/bureau) ಎಲೆಗಳನ್ನು ಇಟ್ಟರೆ ಹೆಚ್ಚಿನ ಐಶ್ವರ್ಯ ಬರುತ್ತದೆ, ರೈತರು ಬನ್ನಿ ಎಲೆಗಳನ್ನು ತಮ್ಮ ಹೊಲ ಗದ್ದೆಗಳಿಗೆ ಹಾಕುತ್ತಾರೆ, ಇದರಿಂದ ಒಳ್ಳೆ ಬೆಳೆ ಬರುತ್ತದೆ ಎಂಬ ನಂಬಿಕೆ.

ವಿಜಯ ದಶಮಿಯ ಶುಭಕರವಾದ ದಿನ. ಯಾವುದೆ ಕೆಲಸ ಮಾಡಿದರು ಅದು ಯಶ್ವಿಯಾಗುವುದು ಎಂಬ ನಂಬಿಕೆ. ಹೀಗಾಗಿ ಈ ದಿನ ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹಪ್ರವೇಶ, ನಾಮಕರಣ ಮುಂತಾದ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಹೊಸ ವ್ಯಾಪರ ಶುರು, ಹೊಸ ವಾಹನ, ಆಸ್ತಿ ಖರೀದಿ ಮಾಡುತ್ತಾರೆ.

ನವರಾತ್ರಿಯ ಬಾಕಿ ದಿನಗಳಂತೆ ವಿಜಯ ದಶಮಿಯ ದಿನ ಗೊಂಬೆಗಳಿಗೆ, ದೇವರಿಗೆ ಪೂಜೆ ಮಾಡುತ್ತಾರೆ. ರಾತ್ರಿ ಮಲಗುವ ಮುನ್ನ ಗೊಂಬೆಗಳಿಗೆ ಪುನಃ ನಮಸ್ಕರಿಸಿ ಪಟ್ಟದ ಗೊಂಬೆಗಳನ್ನು ಮಲಗಿಸುತ್ತಾರೆ. ಮಾರನೆಯ ದಿನ ಗೊಂಬೆಗಳನ್ನು ವಿಸರ್ಜಿಸುತ್ತಾರೆ. ಅಲ್ಲಿಗೆ ನವರಾತ್ರಿಯ ಆಚರಣೆ ಮುಕ್ತಾಯವಾಯಿತು.


ಈ ವಿಜಯ ದಶಮಿಯು ನಿಮ್ಮ ಎಲ್ಲ ಕಾರ್ಯಗಳಲ್ಲಿ ವಿಜಯ ಕೊಡಲಿ ಹಾಗು ದೇವಿಯು ನಿಮ್ಮೆಲ್ಲರನ್ನು ಕಾಪಾಡಲಿ.

July 24, 2010

Vaibhava Lakshmi Vrata in Kannada / ವೈಭವ ಲಕ್ಷ್ಮಿ ವ್ರತ

ಕಳೆದ ಹಲವು ದಿನಗಳಲ್ಲಿ ಬಹಳ ಜನ ಓದುಗರು ವೈಭವ ಲಕ್ಷ್ಮಿ ವ್ರತದ ಬಗ್ಗೆ ಬರೆಯಿರಿ ಅಂತ ಕೋರಿಕೆ ಮಾಡಿದ್ದರೆ. ಹಾಗಾಗಿ ಈ ವೈಭವ ಲಕ್ಷ್ಮಿ ಪೂಜೆ ಬಗ್ಗೆ ವಿವರ ಇಲ್ಲಿದೆ.ಈ ವ್ರತವನ್ನು ಶುಕ್ರವಾರ ಸಂಜೆ ಮಾಡಬೇಕು. ಲಕ್ಷ್ಮೀ ಯಂತ್ರವನ್ನು ರಂಗೊಲಿಯಾಗಿ ಬರೆಯಬಹುದು ಅಥವಾ ಚಿತ್ರವನ್ನು ಇಡಬಹುದು. ಇದರ ಮೇಲೆ ಒಂದು ಕಲಶ ಪಾತ್ರೆಯಲ್ಲಿ ಆಭರಣ ಇಟ್ಟು ಪೂಜೆ ಮಾಡಬೇಕು. ಹೀಗೆ ೫ ಶುಕ್ರ ವಾರ ಪೂಜೆ ಮಾಡಿದ ನಂತರ ೮ ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮ ಹಾಗು ಈ ಪುಸ್ತಕದ ಒಂದು ಪ್ರತಿಯನ್ನು ಕೊಡಬೇಕು.ಪೂಜಾ ವಿಧಾನದ ಪೂರ್ಣ ವಿವರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Lakshmi yantra / Vaibhava lakshmi Rangoli(left side)
Vaibhava Lakshmi Pooja Vidhana in Kannada - scanned from book
12345

6789
----------------------------------------------------

Lakshmi Stotras:

1.Vaibhava Lakshmi Pooja Vidhana Audio in Kannada

2.Mahalakshmi Ashtakam

3.Lakshmi Ashtottara

4.Ashtalakshmi Stotra

5.Kanakadhara Stotra

6.Lakshmi Songs with lyrics


ವೈಭವ ಲಕ್ಷ್ಮಿಯು ಎಲ್ಲರಿಗೂ ಐಶ್ವರ್ಯ ಅಭಿವೃದ್ಧಿ ಕೊಟ್ಟು ಕಾಪಾಡಲಿ :)

May 15, 2010

Akshaya Tritiya / ಅಕ್ಷ ತದಿಗೆ


ಅಕ್ಷಯ ತೃತೀಯ / ಅಕ್ಷ ತದಿಗೆ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತ್ರಿತೀಯ / ತದಿಗೆ ದಿನ ಆಚರಿಸುತ್ತಾರೆ. ಇದು ರೋಹಿಣಿ ನಕ್ಷತ್ರ, ಬುಧವಾರ ಬಂದರೆ ಇನ್ನೂ ಹೆಚ್ಚು ವಿಶೇಷ. ಅಕ್ಷಯ ಎಂದರೆ ಕ್ಷಯವಾಗದ, ಮುಗಿಯದ, ಬರಿದಾಗದ, ಖಾಲಿ ಆಗದ ಎಂದರ್ಥ. ಅಂತಯೇ ಈ ದಿನ ಮಾಡಿದ ಎಲ್ಲ ಕೆಲಸಗಳಿಂದ ಅಕ್ಷಯವಾದ ಪುಣ್ಯ, ಲಾಭ ದೊರೆಯುತ್ತದೆ ಎಂಬ ನಂಬಿಕೆ.

ಈ ದಿನ ಐಶ್ವರ್ಯ, ಆಸ್ತಿ, ಸಂಪತ್ತನ್ನು ಪಡೆದರೆ ಅದು ಅಕ್ಷಯವಾಗುವುದು ಎಂಬ ನಂಬಿಕೆ. ಹೀಗಾಗಿ ಬಂಗಾರ ಖರೀದಿಸಲು ಒಳ್ಳೆಯ ದಿನ. ಖರೀದಿ ಮಾಡಿದ ವಡವೆಗಳನ್ನು ಗಂಧ ಫಲ ಪುಷ್ಪಗಳಿಂದ ಪೂಜಿಸಿ ಧರಿಸಬೇಕು. ಬಹಳ ಜನ ಹೊಸ ಮನೆ, ಆಸ್ತಿ, ಜಮೀನು, ವಾಹನ, ಇತ್ಯಾದಿಗಳನ್ನು ಖರೀದಿ ಮಾಡುತ್ತಾರೆ. ಹಲವಾರು ಶುಭ ಸಮಾರಂಭಗಳನ್ನೂ ಆಚರಿಸುತ್ತಾರೆ. ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹ ಪ್ರವೇಶ, ಚೌಲ ಅಕ್ಷರಾಭ್ಯಾಸ, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಕ್ರಮಗಳನ್ನು ಈ ದಿನ ಮಾಡುತ್ತಾರೆ.

ನಾವು ಪಡೆದ, ಗಳಿಸಿದ ಸಂಪತ್ತು ಅಕ್ಷ್ಯವಾಗುವುದರ ಜೊತೆಗೆ , ನಾವು ಕೊಟ್ಟ ದಾನ, ಮಾಡಿದ ಒಳ್ಳೆ ಕಾರ್ಯಗಳಿಂದ ಬರುವ ಪುಣ್ಯವು ಅಕ್ಷಯವಾಗುತ್ತದೆ. ಹೀಗಾಗಿ ಈ ದಿನ ನಿಮ್ಮ ಶಕ್ತಿಗನುಸಾರವಾಗಿ ದಾನ ಮಾಡುವುದು ಉಚಿತ.ಈ ದಿನ ಮಾಡಿದ ಪೂಜೆ, ಜಪ, ಹೋಮಾದಿಗಳು ಅಕ್ಷಯವಾದ ಪುಣ್ಯ ಕೊಡುತ್ತದೆ. ಸಮುದ್ರ ಸ್ನಾನದಿಂದ ವಿಶೇಷ ಫಲ. ಸತ್ಪಾತ್ರರಿಗೆ ಅನ್ನದಾನ, ದಕ್ಷಿಣೆ ದಾನ ಮಾಡುವುದು ಸೂಕ್ತ. ಅಕ್ಷಯ ತ್ರಿತೀಯ ಮಹಾತ್ಮೆಯನ್ನು ಪಾರಾಯಣ ಮಾಡಿ.

ಈ ಹಬ್ಬಕ್ಕೆ ವಿಶೇಷವಾದ ಪೂಜೆ, ನಿಯಮ ಅಂತ ಇಲ್ಲ. ನಿಮ್ಮ ಮನೆಯಲ್ಲಿ ನಡೆಸಿಕೊಂಡು ಬಂದಿರುವ ಪದ್ಧತಿಯನ್ನು ಅನುಸರಿಸಿ. ನಮ್ಮ ಮನೆಯಲ್ಲಿ ಈ ದಿನ ಗೌರಿ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ. ಭಕ್ತಿಯಿಂದ ಪೂಜೆ ಮಾಡಿ, ದೇವಿಯ ಹೆಸರಲ್ಲಿ ಸುಮಂಗಲಿಯರಿಗೆ ಅರಿಶಿನ ಕುಂಕುಮ, ದಕ್ಷಿಣೆ, ಪಾನಕ ಕೋಸಂಬರಿ ಕೊಡುವ ಪದ್ಧತಿ ಇದೆ. ಒಟ್ಟಿನಲ್ಲಿ ಈ ದಿನ ಮಾಡಿದ ಒಳ್ಳೆಯ ಕಾರ್ಯಗಳಿಗೆ ಅತಿಶಯವಾದ ಪುಣ್ಯವಿದೆ.

Related Link

April 17, 2010

List of Hindu Festivals / ಹಿಂದೂ ಹಬ್ಬಗಳ ಪಟ್ಟಿ


ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಹಬ್ಬ ಹರಿದಿನಗಳಿವೆ. ಅದರಲ್ಲಿ ಮುಖ್ಯವಾಗಿ ಆಚರಿಸುವ ಹಬ್ಬಗಳ ಪಟ್ಟಿ ಕೆಳಗಿದೆ. ಇವುಗಳನ್ನು ತಿಂಗಳು ಪ್ರಕಾರ ಬರೆದಿದ್ದೀನಿ.
For actual date of the festival, click here for this year's Panchanga

ಪ್ರತಿ ತಿಂಗಳು ಆಚರಿಸುವ ವ್ರತ :
1.ಸತ್ಯನಾರಾಯಣ ವ್ರತ (ಮಾಸ ಪೂರ್ಣಿಮೆ /ಹುಣ್ಣಿಮೆ) Festival Link

2.ಸಂಕಷ್ಟ ಹರ ಗಣಪತಿ ವ್ರತ(ಮಾಸ ಕೃಷ್ಣ ಪಕ್ಷ ಚತುರ್ಥಿ)Festival Link


ಚೈತ್ರ
ಮಾಸದ ವಿಶೇಷ ದಿನಗಳು
1.ಯುಗಾದಿ ( ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ್/ಪಾಡ್ಯ)Festival Link
2.ಗೌರೀತದಿಗೆ ( ಚೈತ್ರ ಮಾಸ ಶುಕ್ಲ ಪಕ್ಷದ ತದಿಗೆ)
3.ರಾಮನವಮಿ ( ಚೈತ್ರ ಮಾಸ ಶುಕ್ಲ ಪಕ್ಷದ ನವಮಿ)
Festival Link

ವೈಶಾಖ ಮಾಸದ ವಿಶೇಷ ದಿನಗಳು
1.ಅಕ್ಷಯ ತೃತೀಯಾ (ವೈಶಾಖ ಮಾಸ ಶುಕ್ಲ ಪಕ್ಷದ ತದಿಗೆ)Festival Link
2.ಶಂಕರಾಚಾರ್ಯ ಜಯಂತಿ (ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ)Festival Link
3.ಶ್ರೀ ನೃಸಿಂಹ ಜಯಂತೀ (ವೈಶಾಖ ಮಾಸ ಶುಕ್ಲ ಪಕ್ಷದ ಚತುರ್ದಶಿ)
Festival Link

ಜ್ಯೇಷ್ಠಮಾಸದ ವಿಶೇಷ ವಿಶೇಷ ದಿನಗಳು
1.ವಟ ಸಾವಿತ್ರಿ ವ್ರತ (ಜ್ಯೇಷ್ಠ ಮಾಸದ ಪೂರ್ಣಿಮೆ /ಹುಣ್ಣಿಮೆ )

ಆಷಾಢ ಮಾಸದ ವಿಶೇಷ ದಿನಗಳು
1.ಆಷಾಡ ಶುಕ್ರವಾರ (ಆಷಾಢ ಮಾಸದ ಶುಕ್ರವಾರಗಳು )
2.ಗುರು ಪೂರ್ಣಿಮಾ (ಆಷಾಢ ಮಾಸ ಪೂರ್ಣಿಮೆ /ಹುಣ್ಣಿಮೆ )Festival Link
3.ಭೀಮನ ಅಮಾವಸ್ಯೆ (ಆಷಾಡ ಮಾಸ ಅಮಾವಸ್ಯೆ)Festival Link

ಶ್ರಾವಣ ಮಾಸದ ವಿಶೇಷ ದಿನಗಳು
1.ಮಂಗಳಗೌರೀ ವ್ರತ (ಶ್ರಾವಣಮಾಸದ ನಾಲ್ಕು ಮಂಗಳವಾರ)Festival Link
2.ಸಂಪತ್ತು ಶುಕ್ರವಾರ (ಶ್ರಾವಣ ಮಾಸದ ಶುಕ್ರವಾರಗಳು)
3.ಶ್ರಾವಣ ಶನಿವಾರ (ಶ್ರಾವಣ ಮಾಸದ ಶನಿವಾರಗಳು)
4.ನಾಗಚತುರ್ಥಿ (ಶ್ರಾವಣ ಮಾಸ ಶುಕ್ಲ ಪಕ್ಷದ ಚತುರ್ಥಿ)
5.ನಾಗಪಂಚಮೀ (ಶ್ರಾವಣ ಮಾಸ ಶುಕ್ಲ ಪಕ್ಷದ ಪಂಚಮೀ)Festival Link
6.ವರಮಹಾಲಕ್ಷ್ಮೀ ವ್ರತ (ಶ್ರಾವಣ ಮಾಸದ ಶುಕ್ಲ ಪಕ್ಷದ 2 ನೇ ಶುಕ್ರವಾರ )Festival Link
7.ಉಪಾಕರ್ಮ (ಶ್ರಾವಣ ಮಾಸ ಶುಕ್ಲ ಪಕ್ಷದ ಚತುರ್ದಶಿ)
8.ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ (ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತೀಯಾ)
9.ಕೃಷ್ಣಾಷ್ಟಮೀ (ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ)Festival Link
ಭಾದ್ರಪದ ಮಾಸದ ವಿಶೇಷ ದಿನಗಳು
1.ಸ್ವರ್ಣಗೌರೀ (ಭಾದ್ರಪದ ಶುಕ್ಲ ಪಕ್ಷದ ತೃತೀಯಾ )Festival Link
2.ಗಣೇಶಚತುರ್ಥೀ (ಭಾದ್ರಪದ ಶುಕ್ಲ ಪಕ್ಷದ ಚೌತಿ )Festival Link
3.ಅನಂತಪದ್ಮನಾಭ ವ್ರತ (ಭಾದ್ರಪದ ಶುಕ್ಲ ಪಕ್ಷದ ಚತುರ್ದಶೀ )Festival Link
4.ಪಿತೃಪಕ್ಷ - ಮಹಾಲಯ (ಭಾದ್ರಪದ ಕೃಷ್ಣಪಕ್ಷ )

ಆಶ್ವಯುಜ ಮಾಸದ ವಿಶೇಷ ದಿನಗಳು
1.ನವರಾತ್ರಿ (ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿಂದ ದಶಮಿ ಯವರೆಗೆ)Festival Link
2.ಸರಸ್ವತಿ ಪೂಜೆ (ಆಶ್ವಯುಜ ಶುಕ್ಲ ಪಕ್ಷದ ಸಪ್ತಮಿ)Festival Link
3.ದುರ್ಗಾಷ್ಟಮಿ (ಆಶ್ವಯುಜ ಶುಕ್ಲ ಪಕ್ಷದ ಅಷ್ಟಮಿ)Festival Link
4.ಆಯುಧ ಪೂಜಾ / ಮಹಾ ನವಮಿ (ಆಶ್ವಯುಜ ಶುಕ್ಲ ಪಕ್ಷದ ನವಮಿ)Festival Link
5.ವಿಜಯದಶಮಿ (ಆಶ್ವಯುಜ ಶುಕ್ಲ ಪಕ್ಷದ ದಶಮಿ)Festival Link
6.ಮಧ್ವಜಯಂತೀ (ಆಶ್ವಯುಜ ಶುಕ್ಲ ಪಕ್ಷದ ದಶಮಿ)
7.ನರಕಚತುರ್ದಶೀ (ಆಶ್ವಯುಜ ಕೃಷ್ಣ ಪಕ್ಷದ ಚತುರ್ದಶೀ )Festival Link
8.ದೀಪಾವಳೀ ಅಮಾವಾಸ್ಯೆ ಲಕ್ಷ್ಮೀ ಪೂಜೆ (ಆಶ್ವಯುಜ ಅಮಾವಸ್ಯೆ )Festival Link

ಕಾರ್ತೀಕ ಮಾಸದ ವಿಶೇಷ ದಿನಗಳು
1.ಬಲಿಪಾಡ್ಯಮೀ (ಕಾರ್ತೀಕ ಶುಕ್ಲ ಪಕ್ಷದ ಪಾಡ್ಯ )Festival Link
2.ಉತ್ತಾನದ್ವಾದಶೀ (ಕಾರ್ತೀಕ ಶುಕ್ಲ ಪಕ್ಷದ ದ್ವಾದಶೀ )Festival Link
3.ಕಾರ್ತೀಕ ಸೋಮವಾರ (ಕಾರ್ತೀಕ ಮಾಸದ ಸೋಮವಾರಗಳು)

ಮಾರ್ಗಶಿರ ಮಾಸದ ವಿಶೇಷ ದಿನಗಳು

1.ಸುಬ್ರಹ್ಮಣ್ಯ ಷಷ್ಠೀ (ಮಾರ್ಗಶಿರ ಶುಕ್ಲ ಪಕ್ಷದ ಷಷ್ಠಿ )Festival Link
2.ಗೀತಾ ಜಯಂತಿ(ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ)
3.ದತ್ತಾತ್ರೇಯ ಜಯಂತಿ (ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ)Festival Link
4.ಎಳ್ಳಮಾವಸ್ಯೆ (ಮಾರ್ಗಶಿರ ಮಾಸದ ಅಮಾವಸ್ಯೆ)
5.ವೈಕುಂಠ ಏಕಾದಶಿ (ಧನುರ್ಮಾಸದ ಏಕಾದಶಿ)
6.ಮಾರ್ಗಶಿರ ಮಹಾಲಕ್ಷ್ಮಿ ವ್ರತ (ಮಾರ್ಗಶಿರ ಮಾಸದ ಗುರುವಾರಗಳು)

ಪುಷ್ಯ ಮಾಸದ ವಿಶೇಷ ದಿನಗಳು
1.ವೈಕುಂಠ ಏಕಾದಶಿ (ಧನುರ್ಮಾಸದ ಏಕಾದಶಿ)
2.ಮಕರ ಸಂಕ್ರಮಣ/ಸಂಕ್ರಾಂತಿ Festival Link
ಮಾಘ ಮಾಸದ ವಿಶೇಷ ದಿನಗಳು
1.ವಸಂತ ಪಂಚಮೀ(ಮಾಘ ಮಾಸದ ಶುಕ್ಲ ಪಕ್ಷದ ಪಂಚಮೀ)
2.ರಥಸಪ್ತಮಿ (ಮಾಘ ಶುಕ್ಲ ಪಕ್ಷದ ಸಪ್ತಮಿ)Festival Link
3.ಮಧ್ವನವಮೀ (ಮಾಘ ಶುಕ್ಲ ಪಕ್ಷದ ನವಮಿ)
4.ಶಿವರಾತ್ರಿ (ಮಾಘ ಕೃಷ್ಣ ಪಕ್ಷದ ಚತುರ್ದಶಿ)Festival Link

ಫಾಲ್ಗುಣ ಮಾಸದ ವಿಶೇಷ ದಿನಗಳು
1.ಹೋಲೀ ಹುಣ್ಣಿಮೆ (ಫಾಲ್ಗುಣ ಮಾಸದ ಪೂರ್ಣಿಮೆ /ಹುಣ್ಣಿಮೆ)

November 20, 2009

Subramanya (Subbaraya) Shashti / ಸುಬ್ರಹ್ಮಣ್ಯ ಷಷ್ಠಿ

ಸುಬ್ರಹ್ಮಣ್ಯ ಷಷ್ಠಿ / ಸುಬ್ಬರಾಯ ಷಷ್ಠಿ ಹಬ್ಬವನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನ ಆಚರಿಸುತ್ತಾರೆ. ಈ ದಿನ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಬೆಳ್ಳಿ ನಾಗಪ್ಪನ ವಿಗ್ರಹ, ಸುಬ್ರಮಣ್ಯ ಸ್ವಾಮಿಯ ಪಟ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿಗೆ ಪೂಜೆ ಮಾಡಬೇಕು. ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು.ಪೂಜಾ ವಿಧಾನ ಇಲ್ಲಿದೆ. ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.

ನೈವೇದ್ಯಕ್ಕೆ ಯಾವುದಾದರು ಸಿಹಿ ತಿಂಡಿ ಮಾಡಿಕೊಳ್ಳಿ. ಪೂಜೆಯ ನಂತರ ಉಪನಯನ ಆಗಿರುವ ವಟುವನ್ನು ಮನೆಗೆ ಕರೆದು ಭಕ್ಷ್ಯ ಭೋಜನ ಹಾಕಿ. ಈ ಬ್ರಹ್ಮಚಾರಿ ಬಾಲಕ ಶ್ರೀ ಸುಬ್ರಮಣ್ಯ ಸ್ವಾಮಿಯ ಸ್ವರೂಪ ಎಂದು ಭಾವಿಸಿ ಅವನಿಗೆ ಉಪಚಾರ ಮಾಡಿ. ಊಟದ ನಂತರ ಅವನಿಗೆ ಯಥೇಚ್ಚವಾಗಿ ಉಡುಗೊರೆ, ದಕ್ಷಿಣೆ, ದಾನ ಕೊಟ್ಟು ಸಂತೃಪ್ತಿ ಪಡಿಸಬೇಕು. ನಂತರ ಮನೆಯವರೆಲ್ಲ ಊಟ ಮಾಡಬೇಕು.

ಈ ದಿನ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನನ್ನು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.

Useful Links:
Subramanya Ashottara
Subramanya Stotram
Subrahmanya Ashtaka
Subramanya Bhujangam


Subrahmanya Sahasranamavali by lakshmipathi(song 11)


  Subramanya Songs by VidyaBhushana:
Bandu Nodiro Shree Subramanya
Subbaraya Shubhakaya 
Subrahmanya Suragraganya 
Subramanya Subramanya

October 16, 2009

Naraka Chaturdashi, Deepavali Lakshmi Pooja, Balipadyami Festival / ದೀಪಾವಳಿ ಹಬ್ಬ

(Diwali greeting source: shubhashaya.com)
ಸ್ನೇಹಿತರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು :)
ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುತ್ತೀವಿ. ದೀಪಾವಳಿ ಅಂದರೆ ೩-೪ ದಿನದ ಹಬ್ಬ.
  • ತ್ರಯೋದಶಿ ದಿನ - ನೀರು ತುಂಬುವ ಹಬ್ಬ
  • ಚತುರ್ದಶಿ ದಿನ - ನರಕ ಚತುರ್ದಶಿ
  • ಅಮಾವಾಸ್ಯೆ ದಿನ - ಧನ ಲಕ್ಷ್ಮೀ ಪೂಜೆ
  • ಪಾಡ್ಯ ದಿನ - ಬಲಿ ಪಾಡ್ಯಮಿ /ಬಲೀಂದ್ರನ ಪೂಜೆ
ನೀರು ತುಂಬುವ ಹಬ್ಬ - ಹೆಸರೇ ಹೇಳುವಂತೆ ನೀರನ್ನು ಸಂಗ್ರಹಿಸುವ ದಿನ. ಈ ದಿನ ಸ್ನಾನದ ಮನೆ, ಬಚ್ಚಲನ್ನು ಸ್ವಚ್ಛಮಾಡಿ, ಮಾರನೆಯ ದಿನದ ಅಭ್ಯಂಜನಕ್ಕೆ ನೀರು ಹಿಡಿದು ಇಡುತ್ತಾರೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರಮಾಡುವಂತೆ , ನಮ್ಮ ಮನಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿ ಇಟ್ಟುಕೊಳ್ಳಿ ಎಂಬ ಸಂಕೇತ ಇರಬಹುದು. ಹಿಂದಿನ ಕಾಲದಲ್ಲಿ ತುಂಬಿದ ಸಂಸಾರ, ಮನೆಯಲ್ಲಿ ಬಹಳ ಜನ ಇರುತ್ತಿದ್ದರು. ಎಲ್ಲರೂ ಒಂದೇ ದಿನ ಅಭ್ಯಂಜನ ಮಾಡಬೇಕಾದರೆ ಸಾಕಷ್ಟು ನೀರು ಮೊದಲೇ ಶೇಖರಿಸಿ ಇಡಬೇಕಿತ್ತು.ಹೀಗಾಗಿ ಈ ದಿನ ನೀರುಹಿಡಿಯುವುದರಲ್ಲೇ ಕಳೆದು ಹೋಗುತ್ತಿತ್ತು ಅನ್ನಿಸುತ್ತದೆ.ಅದಕ್ಕೆ ದಿನವನ್ನು ನೀರು ತುಂಬುವ ಹಬ್ಬವೆಂದು ಆಚರಿಸುವ ವಾಡಿಕೆ ಬಂತೇನೋ.ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ :)

ನರಕ ಚತುರ್ದಶಿ ದಿನ ಬೆಳಿಗ್ಗೆ ಮನೆಯವರೆಲ್ಲ ಎಣ್ಣೆ ಶಾಸ್ತ್ರ ಮಾಡಿ ಅಭ್ಯಂಜನ ಸ್ನಾನ ಮಾಡುವ ಪದ್ಧತಿ. ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ನೆನಪಿನ ದಿನ. ಈ ವಿಜಯವನ್ನು ಆಚರಿಸುತ್ತೀವಿ. ಈ ದಿನ ವಿಶೇಷವಾದ ಪೂಜೆ ಅಂತೇನು ಇಲ್ಲ. ಪ್ರತಿದಿನದಂತೆ ದೇವರ ಪೂಜೆ ಅಷ್ಟೆ.

Amavasya Lakshmi Pooje:

ಮಾರನೆಯ ದಿನ ಅಮಾವಾಸ್ಯೆ.ಧನಲಕ್ಷ್ಮೀ ಪೂಜೆ ಅಮಾವಾಸ್ಯೆ ದಿ ಮಾಡುತಾರೆ. ಪೂಜೆಯನ್ನು ಸಾಯಂಕಾಲ ಮಾಡಬೇಕು. ದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ , ಬೆಳ್ಳಿ ವಿಗ್ರಹ /ಪ್ರತಿಮೆ ಇಟ್ಟುಕೊಳ್ಳಿ. ದರ ಜೊತೆಗೆ ನಿಮ್ಮ ಮನೆಯಲ್ಲಿರುವ ದುಡ್ಡು/ಕಾಸು/ನಾಣ್ಯಗಳು ಮತ್ತು ವಡವೆ/ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಲಕ್ಷ್ಮೀ ಅಷ್ಟೂತ್ತರ ಇಲ್ಲಿದೆ. ಯಾವುದಾದರು ಸಿಹಿ ತಿಂಡಿ ಮಾಡಿ, ದೇವಿಗೆ ನೈವೇದ್ಯ ಮಾಡಿ. ಪೂಜೆಯ ನಂತರ ಇದನ್ನು ಪ್ರಸಾದವಾಗಿ ಸ್ವೀಕರಿಸಿ. ಸಕಲ ಐಶ್ವರ್ಯ ಸಂಪತ್ತನ್ನು ಕರುಣಿಸಿ ಎಂದು ಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸಿ.ನಮ್ಮ ಮನೆಯಲ್ಲಿ ಮಾಡಿದ ಪೂಜೆಯ ಚಿತ್ರ ಕೆಳಗಿದೆ.
Lakshmi Stotras:
1. Mahalakshmi Ashtaka

2.Lakshmi Ashtottara

3.Ashtalakshmi Stotra

4.Kanakadhara Stotra

5. Lakshmi aarti song

6. Songs on Lakshmi with lyrics

ಅಮಾವಾಸ್ಯೆ ಮಾರನೆಯ ದಿನ ಕಾರ್ತಿಕ ಮಾಸದ ಪಾಡ್ಯ/ಪ್ರತಿಪತ್ . ಈ ದಿನ ಬಲಿ ಪಾಡ್ಯಮಿ ಹಬ್ಬ. ಬಲಿ ಚಕ್ರವರ್ತಿಯು ಭೂಲೋಕ ಆಳುತ್ತಿದ್ದ ರಾಜ. ವಿಜಯಶಾಲಿಯಾದ ರಾಜನು ದೇವಲೋಕವನ್ನೂ ಗೆದ್ದುಕೊಂಡು ತನ್ನದಾಗಿಸಿಕೊಂಡನು. ಇದರಿಂದ ಇಂದ್ರಾದಿ ದೇವತೆಗಳು ದೇವಲೋಕವನ್ನು ಬಿಡುವಂತಾಯಿತು. ಅವರು ವಿಷ್ಣುವಿನಲ್ಲಿ ಮೊರೆ ಹೋದರು. ಆಗ ಶ್ರೀ ವಿಷ್ಣು ವಾಮನ ಅವತಾರ ತಾಳಿ ಬಲಿಯ ಬಳಿ ಬಂದು, ತನಗೆ ೩ ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದನು. ಒಂದು ಹೆಜ್ಜೆಯಿಂದ ಭೂಲೋಕವೆಲ್ಲ ಮುಚ್ಚಿತು, ಇನ್ನೊಂದು ಹೆಜ್ಜೆಯಿಂದ ಆಕಾಶವೆಲ್ಲ ಮುಚ್ಚಿ ಹೋಯಿತು. ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನ ಕೇಳಲು, ಬಲಿಯು ನನ್ನ ತಲೆ ಮೇಲೆ ಇಡು ಎಂದನು. ಹೀಗ ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ತುಳಿದನು. ಬಲಿಯ ಧರ್ಮ ನಿಷ್ಠೆಯನ್ನು ಮೆಚ್ಚಿ ವಿಷ್ಣುವು ಅವನಿಗೆ ಪಾತಾಳದ ಅಧಿಪತ್ಯ ಕೊಟ್ಟನು. ಜೊತೆಗೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಮರಳಿ ಬಂದು, ಭೂಲೋಕವನ್ನು ಆಳುವಂತೆ ಅನುಗ್ರಹಿಸಿದನು. ಇದೆ ಬಲಿಪಾಡ್ಯಮಿ. ಈ ದಿನ ಗೊಪೂಜೆಯೂ ನಡೆಯುತ್ತದೆ. ಮನೆಯಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ ಮಾಡುತ್ತಾರೆ. ಕೆಲವರ ಮನೆಯಲ್ಲಿ ಕೆರಕ ಇಟ್ಟು ಪೂಜೆ ಮಾಡುತ್ತಾರೆ. ಕೆರಕ ಎಂದರೆ ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಡುತ್ತಾರೆ. ಇದು ಗಣಪತಿಯ ಸ್ವರೂಪ ಎಂದು ಭಾವಿಸುತ್ತಾರೆ. ಬಲಿ ಚಕ್ರವರ್ತಿಯ ರಾಜ್ಯವು ಐಶ್ವರ್ಯ, ಅಭಿವೃದ್ಧಿ ಹೊಂದಿತ್ತು. ಅಂತಯೇ ನಮ್ಮ ಬಾಳಲ್ಲೂ ಲಕ್ಷ್ಮೀ ಸ್ಥಿರವಾಗಿ ನೆಲಿಸಿ, ಅಭಿವೃದ್ಧಿ ಸಿಗಲಿ ಎಂದು ಪ್ರಾರ್ಥನೆ ಮಾಡುವ ಪದ್ಧತಿ.


ದೀಪಾವಳಿ ಹಬ್ಬದಲ್ಲಿ ನೇಮ, ಉಪವಾಸ, ವ್ರತ ಕಥೆ ಇವ್ಯಾವುದೂ ಇಲ್ಲ. ಹಾಗಾಗಿ ಇದು ಸಂತಸ, ಸಡಗರ, ಸಂಭ್ರಮದ ಹಬ್ಬ :) ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ ಮಾಡಿ,ಹೊಸ ಉಡುಗೆ ಹಾಕಿಕೊಂಡು, ರುಚಿಯಾದ ಹಬ್ಬದ ಅಡಿಗೆ ಊಟ ಮಾಡಿ, ವಿಧ ವಿಧವಾದ ಪಟಾಕಿ ಹೊಡೆದು ಆನಂದಿಸುವ ಹಬ್ಬ ಇದು.
ದೀಪಾವಳಿಯ ಬೆಳಕು ಎಲ್ಲರ ಬಾಳನ್ನೂ ಪ್ರಕಾಶಗೊಳಿಸಲಿ ಎಂದು ಆಶಿಸುತ್ತೇನೆ :)

July 27, 2009

Varamahalakshmi Vrata / ವರಮಹಾಲಕ್ಷ್ಮಿ ವ್ರತ


ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ.

ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ವರಮಹಾಲಕ್ಷ್ಮಿ ಪೂಜೆಯ ಚಿತ್ರ ಕೆಳಗಿದೆ.

ವರಮಹಾಲಕ್ಷ್ಮಿ ಕಲಶ ಸ್ಥಾಪನೆ , ಪೂಜೆ (karnataka.com)
ಷೋಡಶೋಪಚಾರದಿಂದ ಮಾಡುವ ಪೂಜಾ ವಿಧಿ ಇಲ್ಲಿದೆ. ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ.ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡಬೇಕು.
ವರಮಹಾಲಕ್ಷ್ಮಿ ವ್ರತ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
ವರಮಹಾಲಕ್ಷ್ಮಿ ವ್ರತ ಕಥೆ ಇಲ್ಲಿ ಓದಬಹುದು (thatskannada)

ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ, ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡಿಗೆಯಲ್ಲಿ ಉಪಯೋಗಿಸಿ, ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಿ. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ, ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು.
ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ :)
Useful Links:

Lakshmi Ashottara
Lakshmi Ashtakam

All Devi Stotras

Lakshmi Sahasranama

Get this widget | Track details |


Songs on Lakshmi Devi

July 20, 2009

Nagara Panchami / Panchami Habba / ನಾಗರ ಪಂಚಮಿ ಹಬ್ಬ

ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ.
ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಪಟ ಇದ್ದೇ ಇರುತ್ತೆ. ಇದನ್ನೂ ಜೊತೆಯಲ್ಲಿ ಇಟ್ಟು ಪೂಜೆ ಮಾಡಬಹುದು. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಸಾಮಾನ್ಯವಾಗಿ ತಾಳೆ(ಕೇದಿಗೆ) ಗಿಡದ ಎಲೆ/ಹೂವನ್ನು ಉಪಯೋಗಿಸಿ ತನಿ ಎರೆಯುತ್ತಾರೆ. ತಾಳೆ(ಕೇದಿಗೆ) ಗಿಡದ ಚಿತ್ರ ಕೆಳಗಿದೆ.(biological name: Pandanus fascicularis)
click on image to enlarge

ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.
ನೈವೇದ್ಯಕ್ಕೆ ಚಿಗಳಿ ( ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ತಂಬಿಟ್ಟು ( ಅಕ್ಕಿ, ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ಮಾಡುತ್ತಾರೆ. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ.
ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.
ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ಮಾಡುತ್ತಾರೆ. ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಕರ್ನಟಾಕದಲ್ಲೇ ಅಲ್ಲ, ಇಡೀ ಭಾರತ ದೇಶದಲ್ಲಿ ನಾಗ ಪಂಚಮಿ ಆಚರಿಸುತ್ತಾರೆ.
Useful Links:
Subramanya Ashottara
Subramanya Stotram

Subramanya Bhujangam


Subrahmanya Ashtaka
Subramanya Shodasha nama stotra
Subrahmanya Sahasranamavali

Subramanya Songs by VidyaBhushana:
  1. Bandu Nodiro Shree Subramanya
  2. Subbaraya Shubhakaya
  3. Subrahmanya Suragraganya
  4. Subramanya Subramanya


July 6, 2009

Guru Poornima / Vyasa Poornima /ಗುರು ಪೂರ್ಣಿಮಾ / ವ್ಯಾಸ ಪೂರ್ಣಿಮಾ


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ


ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆಯನ್ನು ಆಷಾಢ ಮಾಸದ ಪೂರ್ಣಿಮೆಯ ದಿನ ಆಚರಿಸುತ್ತಾರೆ. ಇಂದು ವೇದ ವ್ಯಾಸರ ಜನ್ಮ ದಿನ. ಇವರು ೪ ವೇದಗಳನ್ನು ಸಂಕಲನ ಮಾಡಿದರು ಎಂಬ ನಂಬಿಕೆ. ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೇಶ. ಈ ಗುರಿಯನ್ನು ತಲುಪುವುದಕ್ಕೆ ವೇದಗಳು ಪ್ರಮುಖ ಪಾತ್ರ ಹೊಂದಿದೆ. ಈ ವೇದಗಳನ್ನು ನಮಗೆ ಕೊಟ್ಟಿರುವ ವೇದ ವ್ಯಾಸರು ಧರ್ಮ ಗುರುಗಳು. ಇವರಿಗೆ ನಮ್ಮ ಅನಂತ ನಮಸ್ಕಾರಗಳು.

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಪೂರ್ಣಿಮೆಯ ದಿನ ಚಂದ್ರನು ಪ್ರಕಾಶಮಾನ ಆಗಿರುತ್ತಾನೆ. ಚಂದ್ರನಂತೆ ಪ್ರಕಾಶಿಸುತ್ತಿರುವ ಗುರುವು ನಮ್ಮ ಬಾಳಲ್ಲಿರುವ ಅಂಧಕಾರವನ್ನು ತೊಲಗಿಸಿ , ಜ್ಞಾನದ ಬೆಳಕನ್ನು ಕೊಡುತ್ತಾನೆ ಎಂಬ ಸಂಕೇತವಾಗಿ ಈ ಗುರು ಪೂರ್ಣಿಮಾ ಹಬ್ಬವನ್ನು ಆಚರಿಸುತ್ತಾರೆ.

ಶಂಕರಾಚಾರ್ಯರು, ದತ್ತಾತ್ರೇಯರು, ರಾಘವೇಂದ್ರ ಸ್ವಾಮಿಗಳು, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ ,ಸಾಯಿ ಬಾಬರವರು, ಶ್ರೀ ರವಿಶಂಕರ - ಹೀಗೆ ಹಲವಾರು ಮಹಾಪುರುಷರು ಗುರು ಸ್ವರೂಪರಾಗಿ ನಮಗೆಲ್ಲ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಇಷ್ಟದಂತೆ ಗುರುಗಳನ್ನು ಅನುಸರಿಸುತ್ತಾರೆ. ಈ ದಿನ ಇಷ್ಟೊಂದು ಪ್ರಾಬಲ್ಯ, ಮಹಿಮೆ ಇರುವ ಗುರುಗಳಿಗೆ ನಮನಗಳನ್ನು ಸಲ್ಲಿಸುತ್ತಾರೆ. ಇದಲ್ಲದೇ ನಮ್ಮ ತಾಯಿ, ತಂದೆ, ಪಾಠ/ವಿದ್ಯೆ/ಸಂಗೀತ/ಕಲೆ ಹೇಳಿಕೊಟ್ಟಿರುವ ಗುರುಗಳು - ಇವರಿಗೂ ನಮಸ್ಕಾರಗಳನ್ನು ಸಲ್ಲಿಸಬೇಕು.

ಹಬ್ಬವನ್ನು ಆಚರಿಸುವುದಕ್ಕೆ ವಿಶೇಷವಾದ ಪೂಜೆ ಅಂತಿಲ್ಲ. ನಂಬಿರುವ ಗುರುಗಳ ಪೂಜೆ ಮಾಡುತ್ತಾರೆ. ಗುರುಗಳ ಧ್ಯಾನ, ಭಜನೆ ಮಾಡುತ್ತಾರೆ. ಕೆಲವರು ಸತ್ಸಂಗ ಏರ್ಪಡಿಸುತ್ತಾರೆ. ಹಲವು ಕಡೆ ಗುರುಗಳಿಗೆ ಸತ್ಕಾರ ಕಾರ್ಯಕ್ರಮ(felicitation) ಇರುತ್ತದೆ. ಒಟ್ಟಿನಲ್ಲಿ ಈ ದಿನ ಗುರುವಿನ ಸ್ಮರಣೆಗೆ ಮೀಸಲಾಗಿದೆ.


Useful Links:

ಗುರುಗಳು ನಮ್ಮೆಲರಿಗೂ ಜ್ಞಾನ ನೀಡಿ ಕಾಪಾಡಲಿ :)

May 6, 2009

Narasimha Jayanti, Lakshmi Narasimha Ashtottara Shatanama in Kannada

ನರಸಿಂಹ ಜಯಂತಿ , ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ


ವಿಷ್ಣುವಿನ ಹತ್ತವತಾರದಲ್ಲಿ ನರಸಿಂಹ ಅವತಾರವು ಒಂದು. ಅರ್ಧ ಮನುಷ್ಯ ಅರ್ಧ ಸಿಂಹ ಇರುವ ರೂಪ. ಭಕ್ತ ಪ್ರಹ್ಲಾದನ ಮೊರೆಯನ್ನು ಕೇಳಿ ಕಂಭ ಒಡೆದು ಪ್ರತ್ಯಕ್ಷನಾಗಿ, ಹಿರಣ್ಯ ಕಷಿಪುವನ್ನು ವಧೆ ಮಾಡಿ ಪ್ರಹ್ಲಾದನನ್ನು ಶ್ರೀ ನೃಸಿಂಹ ಕಾಪಾಡಿದನು.

ನರಸಿಂಹ ಜಯಂತಿ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದನ್ನು ಶ್ರೀ ವೈಷ್ಣವರು, ಸೌರಮಾನ ಪಂಚಾಂಗ ಅನುಸರಿಸುವರು ಬೇರೆ ತಿಥಿ ನಕ್ಷತ್ರದಲ್ಲಿ ಆಚರಿಸುತ್ತಾರೆ. ದಿನ ಲಕ್ಷ್ಮಿ ನರಸಿಂಹ ಸ್ವಾಮಿಗೆ
ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಕೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತ ಮಾಡುತ್ತಾರೆ. ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ ಪಟ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio of Narasimha Ashtottara - by VidyaBhushana

2.Audio link by T.Srinivas

ಶ್ರೀ ನರಸಿಂಹ ಸ್ತೋತ್ರಗಳು, ಹಾಡುಗಳು:

ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ :)

April 28, 2009

Shankaracharya Jayanthi / ಶಂಕರಾಚಾರ್ಯ ಜಯಂತಿ

ಶಂಕರ ಜಯಂತಿ / ಶಂಕರಾಚಾರ್ಯ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಇದು ಶಂಕರಾಚಾರ್ಯರ ಜನ್ಮ ದಿನ. ಇವರನ್ನು ಆದಿ ಶಂಕರ, ಶಂಕರ ಭಗವತ್ಪಾದಾಚಾರ್ಯ ಎಂದೂ ಕರೆಯುತ್ತಾರೆ. ಸುಮಾರು ೮ನೇ ಶತಮಾನದಲ್ಲಿ ಜೀವನ ನಡೆಸಿದರು ಎಂದು ಹೇಳುತ್ತಾರೆ. ಇವರು ಕೇರಳದ ಕಾಲಡಿ ಎಂಬ ಊರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಸನ್ಯಾಸವನ್ನು ಆಲಂಗಿಸಿದರು. ಇವರ ಜೀವಿತದ ಅವಧಿ ಕೇವಲ ೩೨ ವರ್ಷವಾದರೂ ಇವರು ಮಾಡಿರುವ ಸಾಧನೆ ಅಪಾರ. ಇವರು ಮನುಷ್ಯ ಸಾಮಾನ್ಯರಲ್ಲ, ದೇವರ ಸ್ವರೂಪ ಎಂದೇ ಹೇಳಬಹುದು.

ಹಿಂದೂ ಧರ್ಮದ ಪ್ರಚಾರಕ್ಕಾಗಿ ಮಠಗಳನ್ನು ಸ್ಥಾಪಿಸಿದರು. ಕನ್ನಡಿಗರಿಗೆ ಶೃಂಗೇರಿ ಶಾರದ ಪೀಠ ಗೊತ್ತೇ ಇದೆ. ಇದಲ್ಲದೇ ಗುಜರಾತ್ ರಾಜ್ಯದ ದ್ವಾರಕದಲ್ಲಿ, ಒರಿಸ್ಸಾ ರಾಜ್ಯದ ಪೂರಿಯಲ್ಲಿ ಮತ್ತು ಉತ್ತರಾಖಾಂಡ ರಾಜ್ಯದಲ್ಲಿ ಮಠಗಳನ್ನು ಸ್ಥಾಪಿಸಿದ್ದಾರೆ.ಶಂಕರಾಚಾರ್ಯರು ಬಹಳಷ್ಟು ರಚನೆಗಳನ್ನೂ ಮಾಡಿದ್ದರೆ. ಹಲವಾರು ದೇವರ ಸ್ತೋತ್ರಗಳನ್ನು ರಚಿಸಿದ್ದಾರೆ. ಭಗವದ್ಗೀತೆ, ಉಪನಿಷದ್ ಮತ್ತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದಿದ್ದಾರೆ. ಅದ್ವೈತ ವೇದಾಂತ ಅಧ್ಯಯನ ಮಾಡುವವರು ಭಾಷ್ಯಗಳನ್ನೇ ಇಂದಿಗೂ ಅನುಸರಿಸುತ್ತಾರೆ.ಅದ್ವೈತ ಅನುಯಾಯಿಗಳಿಗೆ ಇವರೇ ಆದಿ ಗುರುಗಳು.

ಶಂಕರರಿಗಿಂತ ಮುಂಚೆಯೂ ಅದ್ವೈತ ಸಿದ್ಧಾಂತ ಇತ್ತು, ಆದರೆ ಇವರು ಅದಕ್ಕೆ ಒಂದು ನೆಲೆಗಟ್ಟು ಕೊಟ್ಟು, ದೇಶದ ಮೂಲೆ ಮೂಲೆಗೂ ಹೋಗಿ ಅದನ್ನು ಭೋಧಿಸಿ ವ್ಯಾಪಕಗೊಳಿಸಿದರು. ಅದ್ವೈತ ವೇದಾಂತದ ಸಿದ್ಧಾಂತವನ್ನು ದೃಢ ಪಡಿಸಿದರು.ಅದ್ವೈತವನ್ನು ಜನಪ್ರಿಯ ಮಾಡಿ, ಪ್ರಚಾರ ಮಾಡಿರುವುದರ ಮನ್ನಣೆಯೆಲ್ಲ ಆದಿ ಶಂಕರರಿಗೇ ಸೇರುತ್ತದೆ.

ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೆಶವಾಗಿರಬೇಕು. ಈ ಲಕ್ಷ್ಯವನ್ನು ಮುಟ್ಟಲು ಹಲವಾರು ಸಾಧನಗಳು(means) ಹಾಗು ತತ್ವ ಸಿದ್ಧಾಂತಗಳಿವೆ (school of thought). ಇದರಲ್ಲಿ ಅದ್ವೈತ ವೇದಾಂತ ಸಿದ್ಧಾಂತವೂ ಒಂದಾಗಿದೆ. ಈ ಪೂಜೆ, ಮಂತ್ರ, ಸ್ತೋತ್ರ, ಹೋಮ , ಹವನ ಕರ್ಮಗಳೆಲ್ಲವೂ ಸಹ ಈ ಜ್ಞಾನ ಪ್ರಾಪ್ತಿಯ ಮಾರ್ಗದಲ್ಲಿ ಸಾಧನಗಳಷ್ಟೆ. ಪರಮ ಸಾಧನೆಗೆ ಇವೆಲ್ಲವೂ ಮೆಟ್ಟಿಲುಗಳಾಗಬೇಕು. ಪೂಜೆ ಪುನಸ್ಕಾರಗಳನ್ನು ಮಾಡಬೇಕು ನಿಜ, ಆದರೆ ಇದಕ್ಕಿಂತ ಮಿಗಿಲಾದ ಜ್ಞಾನದ ಅನ್ವೇಷಣೆಯಲ್ಲಿ ನಾವು ಹೋಗಬೇಕು. ಬರಿ ಪೂಜೆ ಸ್ತೋತ್ರಗಳಲ್ಲೇ ಮುಕ್ತಾಯ ಆಗಬಾರದು.

ಅದ್ವೈತ ವೇದಾಂತವನ್ನು ನಂಬುವ ಮನೆಯಿಂದ ಬಂದಿರುವ ನನಗೆ ಈ ವಿಶೇಷ ದಿನವನ್ನು ಆಚರಿಸುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನಮ್ಮ ಅತ್ತೆ ಮಾವನವರು ವೆದಾಧ್ಯನ, ಉಪನಿಷದಗಳ ಅಧ್ಯಯನವನ್ನು ಸುಮಾರು ೧೫ ವರ್ಷಗಳಿಂದ ಮಾಡುತ್ತಿದ್ದರೆ. ಅವರಿಂದ ನಾನೂ ಬಹಳಷ್ಟು ತಿಳಿದುಕೊಂಡಿದ್ದೀನಿ, ಇನ್ನು ಅರಿತುಕೊಳ್ಳುವುದು ಬಹಳ ಇದೆ. ನಮ್ಮ ಅತ್ತೆಯವರು ಅದ್ವೈತದ ಬಗ್ಗೆ ಸರಳ ವಿವರಣೆ ಮಾಡಿ ನನಗೆ email ಕಳಿಸಿದ್ದಾರೆ , ಅದನ್ನು ಇಲ್ಲಿ ಹಾಕುತ್ತಿದ್ದೀನಿ .

" I thought I can just give a very simple account of what is Advaita. We all know ourselves as individuals and there is the world of living and non living things, inanimate objects and the whole cosmos. We constantly interact with the world. Many times we sense that this interaction is unpredictable. It means, the way we do things and the way the results come, it is not a straight forward relationship. So we find that there are many unknown factors. So all these unknown factors, we group together and call it God. Since calling God as 'it', doesnt make it feel good, we think of God as a person who is all powerful, and praying to him or her will help me to deal with the world. So there are 3 entities, namely, I the individual, the rest of creation which we call world and the other unknown, God. Advaita establishes that all these 3 are not totally different entities, but is is one entity only which is called Brahman. An analogy is, how sugar being the basic substance, can appear in various shapes and sizes, but in essence is one only. Shankaracharya establishes that this is what all the upanishads, bhagavad gita, brahma sutras are telling in one voice. How this conclusion is arrived at, forms the subject matter of vedanta."

Thanks a lot Amma for this write up :)

Some related links:







Arsha Vidya Gurukulam is an institute for traditional study of Advaitha vedanta, Sanskrit, Yoga etc. check this link for more
http://www.arshavidya.org/

Arsha Vidya Gurukulam satsangs - Read and Listen to satsangs by various gurujis.

http://www.avgsatsang.org/

ನಮ್ಮ ಮನಸ್ಸನ್ನು ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಸುವುದು ಹಬ್ಬದ ಉದ್ದೇಶ. ನನ್ನ ಬರಹವನ್ನು ಓದಿ ಅದ್ವೈತದ ಬಗ್ಗೆ ನಿಮಗೆ ಕುತೂಹಲ ಉಂಟಾಗಿ ಇನ್ನು ಹೆಚ್ಚು ತಿಳಿಯಬೇಕೆಂಬ ಆಸೆ ಹುಟ್ಟಿಸಲಿ ಎಂದು ನನ್ನ ಆಶಯ :)
Blog Widget by LinkWithin