
ಅಕ್ಷಯ ತೃತೀಯ / ಅಕ್ಷ ತದಿಗೆ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತ್ರಿತೀಯ / ತದಿಗೆ ದಿನ ಆಚರಿಸುತ್ತಾರೆ. ಇದು ರೋಹಿಣಿ ನಕ್ಷತ್ರ, ಬುಧವಾರ ಬಂದರೆ ಇನ್ನೂ ಹೆಚ್ಚು ವಿಶೇಷ. ಅಕ್ಷಯ ಎಂದರೆ ಕ್ಷಯವಾಗದ, ಮುಗಿಯದ, ಬರಿದಾಗದ, ಖಾಲಿ ಆಗದ ಎಂದರ್ಥ. ಅಂತಯೇ ಈ ದಿನ ಮಾಡಿದ ಎಲ್ಲ ಕೆಲಸಗಳಿಂದ ಅಕ್ಷಯವಾದ ಪುಣ್ಯ, ಲಾಭ ದೊರೆಯುತ್ತದೆ ಎಂಬ ನಂಬಿಕೆ.
ಈ ದಿನ ಐಶ್ವರ್ಯ, ಆಸ್ತಿ, ಸಂಪತ್ತನ್ನು ಪಡೆದರೆ ಅದು ಅಕ್ಷಯವಾಗುವುದು ಎಂಬ ನಂಬಿಕೆ. ಹೀಗಾಗಿ ಬಂಗಾರ ಖರೀದಿಸಲು ಒಳ್ಳೆಯ ದಿನ. ಖರೀದಿ ಮಾಡಿದ ವಡವೆಗಳನ್ನು ಗಂಧ ಫಲ ಪುಷ್ಪಗಳಿಂದ ಪೂಜಿಸಿ ಧರಿಸಬೇಕು. ಬಹಳ ಜನ ಹೊಸ ಮನೆ, ಆಸ್ತಿ, ಜಮೀನು, ವಾಹನ, ಇತ್ಯಾದಿಗಳನ್ನು ಖರೀದಿ ಮಾಡುತ್ತಾರೆ. ಹಲವಾರು ಶುಭ ಸಮಾರಂಭಗಳನ್ನೂ ಆಚರಿಸುತ್ತಾರೆ. ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹ ಪ್ರವೇಶ, ಚೌಲ ಅಕ್ಷರಾಭ್ಯಾಸ, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಕ್ರಮಗಳನ್ನು ಈ ದಿನ ಮಾಡುತ್ತಾರೆ.
ನಾವು ಪಡೆದ, ಗಳಿಸಿದ ಸಂಪತ್ತು ಅಕ್ಷ್ಯವಾಗುವುದರ ಜೊತೆಗೆ , ನಾವು ಕೊಟ್ಟ ದಾನ, ಮಾಡಿದ ಒಳ್ಳೆ ಕಾರ್ಯಗಳಿಂದ ಬರುವ ಪುಣ್ಯವು ಅಕ್ಷಯವಾಗುತ್ತದೆ. ಹೀಗಾಗಿ ಈ ದಿನ ನಿಮ್ಮ ಶಕ್ತಿಗನುಸಾರವಾಗಿ ದಾನ ಮಾಡುವುದು ಉಚಿತ.ಈ ದಿನ ಮಾಡಿದ ಪೂಜೆ, ಜಪ, ಹೋಮಾದಿಗಳು ಅಕ್ಷಯವಾದ ಪುಣ್ಯ ಕೊಡುತ್ತದೆ. ಸಮುದ್ರ ಸ್ನಾನದಿಂದ ವಿಶೇಷ ಫಲ. ಸತ್ಪಾತ್ರರಿಗೆ ಅನ್ನದಾನ, ದಕ್ಷಿಣೆ ದಾನ ಮಾಡುವುದು ಸೂಕ್ತ. ಅಕ್ಷಯ ತ್ರಿತೀಯ ಮಹಾತ್ಮೆಯನ್ನು ಪಾರಾಯಣ ಮಾಡಿ.
ಈ ಹಬ್ಬಕ್ಕೆ ವಿಶೇಷವಾದ ಪೂಜೆ, ನಿಯಮ ಅಂತ ಇಲ್ಲ. ನಿಮ್ಮ ಮನೆಯಲ್ಲಿ ನಡೆಸಿಕೊಂಡು ಬಂದಿರುವ ಪದ್ಧತಿಯನ್ನು ಅನುಸರಿಸಿ. ನಮ್ಮ ಮನೆಯಲ್ಲಿ ಈ ದಿನ ಗೌರಿ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ. ಭಕ್ತಿಯಿಂದ ಪೂಜೆ ಮಾಡಿ, ದೇವಿಯ ಹೆಸರಲ್ಲಿ ಸುಮಂಗಲಿಯರಿಗೆ ಅರಿಶಿನ ಕುಂಕುಮ, ದಕ್ಷಿಣೆ, ಪಾನಕ ಕೋಸಂಬರಿ ಕೊಡುವ ಪದ್ಧತಿ ಇದೆ. ಒಟ್ಟಿನಲ್ಲಿ ಈ ದಿನ ಮಾಡಿದ ಒಳ್ಳೆಯ ಕಾರ್ಯಗಳಿಗೆ ಅತಿಶಯವಾದ ಪುಣ್ಯವಿದೆ.
Related Link
>>>> ಅಕ್ಷಯ ತ್ರಿತೀಯ ಮಹಾತ್ಮೆಯನ್ನು ಪಾರಾಯಣ ಮಾಡಿ. <<<<
ReplyDeleteಪುಸ್ತಕ ಸಿಗುವುದೇ ?ಅಥವಾ ಅದೂ ನಿಮ್ಮ ಬ್ಲಾಗ್ನಲ್ಲಿ ಸಿಗುವುದೋ ? ತಿಳಿಸಿ
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನನಗಂತೂ ಅನುಕೂಲಕರವಾಗಿದೆ
ಹೃತ್ಪೂರ್ವಕ ಧನ್ಯವಾದಗಳು
ಅಂಬಿಕಾ