Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label steps of pooja. Show all posts
Showing posts with label steps of pooja. Show all posts

July 17, 2008

16 Steps of Pooja / ಪೂಜಾ ವಿಧಾನ

ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ
ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.

ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:

1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.

6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.

8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.

12.ದೀಪ - ದೀಪ ಸಮರ್ಪಣೆ ಮಾಡುವುದು.

13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.

ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ :)

Blog Widget by LinkWithin