Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

October 1, 2014

Ayudha Pooja / Maha Navami / Vijaya Dashami / ಮಹಾನವಮಿ / ಆಯುಧ ಪೂಜೆ / ವಿಜಯದಶಮಿ

ಮಹಾ ನವಮಿ ಅಥವಾ ಆಯುಧ ಪೂಜೆ ಹಬ್ಬವನ್ನು ನವರಾತ್ರಿಯ ಒಂಭತ್ತನೆ ದಿನ ಆಚರಿಸುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಈ ದಿನ ಹೆಸರೇ ಹೇಳುವಂತೆ ಆಯುಧಗಳಿಗೆ ಪೂಜೆ ಮಾಡುವ ದಿನ. ಹಿಂದೆ ಮೈಸೂರಿನ ಮಹಾರಾಜರು ಮಹಾನವಮಿಯ ದಿನ ಎಲ್ಲಾ ಆಯುಧಗಳನ್ನು, ತಮ್ಮ ಪಟ್ಟದ ಕತ್ತಿಯನ್ನೂ ಸಹ ತೆಗೆದಿಟ್ಟು ಪೂಜೆ ಮಾಡುತ್ತಿದ್ದರು. ಈ ದಿನ ಅವುಗಳಿಗೆ ವಿರಾಮ/ವಿಶ್ರಾಂತಿ/ರಜಾ ದಿನ. ಈ ಆಯುಧಗಳು ನಮ್ಮನ್ನು ವರುಷವೆಲ್ಲ ಕಾಪಾಡಿವೆ. ಈ ಒಂದು ದಿನ ಅವುಗಳಿಗೆ ವಿರಾಮ ಕೊಟ್ಟು, ಅವುಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ವರ್ಷವೂ ಹೀಗೆ ನಮ್ಮನ್ನು ಕಾಪಾಡಿ ಎಂದು ಅವುಗಳಿಗೆ ಪೂಜೆ ಮಾಡುತ್ತಿದ್ದರು. ರಾಜರ ಆಳ್ವಿಕೆ ಮುಗಿದರೂ, ಈ ಆಯುಧ ಪೂಜೆ ಇಂದಿಗೂ ಎಲ್ಲರೂ ಆಚರಿಸುತ್ತಾರೆ.

ಈಗಿನ ಕಾಲದಲ್ಲಿ ಮನೆಗಳಲ್ಲಿ ದಿನ ನಿತ್ಯ ಉಪಯೋಗಿಸುವ ಆಯುಧಗಳು, ವಾಹನಗಳಿಗೆಲ್ಲ ಪೂಜೆ ಮಾಡುತ್ತಾರೆ. ಕಾರ್ಖಾನೆ,ಉದ್ದಿಮೆ, ಕಛೇರಿ ಎಲ್ಲಾ ಕಡೆ ಅಲ್ಲಿ ಉಪಯೋಗಿಸುವ ಯಂತ್ರಗಳೂ, ಉಪಕರಣಗಳಿಗೆ ಪೂಜೆ ಮಾಡುತ್ತಾರೆ, ಅವುಗಳನ್ನು ಈ ದಿನ ಉಪಯೊಗಿಸುವುದಿಲ್ಲ.

ಆಯುಧ ಪೂಜೆ 

ಈ ದಿನ ದೇವರ ಪೂಜೆಯ ಜೊತೆ ಆಯುಧಗಳಿಗೂ ಪೂಜೆ ಮಾಡಬೇಕು. ಮನೆಯಲ್ಲಿ ದಿನ ನಿತ್ಯ ಉಪಯೋಗಿಸುವ ಆಯುಧಗಳು(ಚಾಕು,ಕತ್ತರಿ,ಇತ್ಯಾದಿ),ಯಂತ್ರೋಪಕರಣಗಳು/ಸಲಕರಣೆಗಳು (gadgets/machines - ಟಿ.ವಿ, ಕಂಪ್ಯೂಟರ್, ಒಲೆ, ಫ್ರಿಡ್ಜ್, ಇತ್ಯಾದಿ), ಮತ್ತು ವಾಹನಗಳು (ಕಾರ್, ಸ್ಕೂಟರ್, ಸೈಕಲ್, ಇತ್ಯಾದಿ) - ಇವುಗಳನ್ನೆಲ್ಲ ಸ್ವಚ್ಛ ಮಾಡಿ ( ಒದ್ದೆ ಬಟ್ಟೆಯಿಂದ ಒರಸಿ/ನೀರಿನಿಂದ ತೊಳೆಯಿರಿ), ಅರಿಶಿನ ಕುಂಕುಮ ಹಚ್ಚಿ, ಹೂವು, ಗೆಜ್ಜೆವಸ್ತ್ರ ಹಾಕಿ, ಊದಿನ ಕಡ್ಡಿ ಹಚ್ಚಿ, ಮಂಗಳಾರತಿ ಮಾಡಿ. ನಾವು ವರ್ಷವೆಲ್ಲಾ ಈ ಉಪಕರಣಗಳಿಂದ ಉಪಯೋಗ ಪಡೆದಿರುತ್ತೇವೆ, ಇವತ್ತು ಅವುಗಳಿಗೆ, ಕೃತಜ್ಞತಾ ಭಾವದಿಂದ ಪೂಜೆ ಮಾಡಿ, ಮುಂದೆಯೂ ನಮಗೆ ಸಹಾಯ ಮಾಡಿ ಎಂದು ಪ್ರಾರ್ಥಿಸಿ.

ವಿಜಯ ದಶಮಿ
ನವರಾತ್ರಿಯ ಹತ್ತನೆಯ ದಿನ ವಿಜಯದಶಮಿ ಹಬ್ಬ. ಆಶ್ವಯುಜ ಮಾಸದ ಶುಕ್ಲ ಪಕ್ಷದ ದಶಮಿ ದಿನ. ಇದು ನವರಾತ್ರಿ ಹಬ್ಬದ ಕೊನೆಯ ದಿನ. ಈ ದಿನ ವಿಶೇಷತೆ ಶಮೀ ಪೂಜೆ. ಶಮೀ ವೃಕ್ಷಕ್ಕೆ ಬನ್ನಿ ಮರ ಅಂತ ಕರೆಯುತ್ತಾರೆ.(biological name: Prosopis cineraria) ಈ ಹಬ್ಬದ ಮಹತ್ವದ ಹಿಂದೆ ಕೆಲವು ಪುರಾಣ ಕಥೆಗಳಿವೆ.
ಬನ್ನಿ ಮರ
(photos taken from hereherehere and here.)

ಮಹಾಭಾರತದಲ್ಲಿ ಪಾಂಡವರು ಅಜ್ಞಾತ ವಾಸಕ್ಕೆ ಹೋಗುವ ಮುನ್ನ ಶಮೀ ವೃಕ್ಷದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋದರು. ಒಂದು ವರ್ಷದ ಅಜ್ಞಾತ ವಾಸದ ನಂತರ ಬಚ್ಚಿಟ್ಟಿದ್ದ ಆಯುಧಗಳು ಶಮೀ ವೃಕ್ಷದಲ್ಲೇ ಜೋಪಾನವಾಗಿ ಇದ್ದವು. ತಮ್ಮ ಆಯುಧಗಳನ್ನು ಕಾಪಾಡಿದ ಶಮೀ ಮರಕ್ಕೆ ನಮಸ್ಕರಿಸಿ, ಕೌರವರ ಮೇಲೆ ಯುದ್ಧ ಮಾಡಲು ಹೋದರು ಮತ್ತು ಯುದ್ಧದಲ್ಲಿ ವಿಜಯ ಸಾಧಿಸಿದರು. ಆದ್ದರಿಂದ ವಿಜಯ ದಶಮಿಯ ದಿನ ಶಮೀ ಪೂಜೆ ಮಾಡುತ್ತರೆ, ಆ ದಿನ ಮಾಡಿದ ಎಲ್ಲಾ ಕಾರ್ಯಗಳಲ್ಲೂ ವಿಜಯ ದೊರಕುವುದು ಎಂಬ ನಂಬಿಕೆ.

ತ್ರೇತಾಯುಗದಲ್ಲಿ ಕೌಸ್ತ ಎಂಬ ವಿದ್ಯಾರ್ಥಿಯು ವಿದ್ಯಾಭ್ಯಾಸದ ನಂತರ ತನ್ನ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸಿದನು. ಆಗ ಗುರು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳಿದನು. ಅಷ್ಟೊಂದು ನಾಣ್ಯವನ್ನು ಹೇಗೆ ಹೊಂದಿಸಲಿ ಎಂದು ಚಿಂತಿಸುತ್ತ ಕೌಸ್ತನು ರಘು ರಾಜನ ಬಳಿ ಬಂದನು. ರಾಜನು ಕುಬೇರನಿಗೆ ಪ್ರಾರ್ಥನೆ ಮಾಡಲು, ಶಮೀ ಮರದ ಒಂದೊಂದು ಎಲೆಯೂ ಚಿನ್ನದ ನಾಣ್ಯವಾದವು. ಕೌಸ್ತನು ಸಂತಸದಿಂದ ನಾಣ್ಯಗಳನ್ನು ತೆಗೆದುಕೊಂಡು ಗುರುಗಳಿಗೆ ಗುರುದಕ್ಷಿಣೆ ಅರ್ಪಿಸಿದನು. ಉಳಿದ ನಾಣ್ಯಗಳನ್ನು ದಾನ ಮಾಡಿದನು ಎಂಬ ಕಥೆಯಿದೆ. ಹೀಗಾಗಿ ಶಮೀ ಪತ್ರೆಯು ಚಿನ್ನ/ನಿಧಿಯೆಂಬ ನಂಬಿಕೆ ಇದೆ.

ಶಮೀ ಪೂಜೆ ಮಾಡುವಾಗ ಕೆಳಗಿನ ಮಂತ್ರವನ್ನು ಹೇಳಬೇಕು.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರಿತ್ವಂ ಭವ ಶ್ರೀರಾಮಪೂಜಿತಾ ||


ಪೂಜೆಯ ನಂತರ ಶಮೀ ಎಲೆಗಳನ್ನು ಬಂಧುಗಳು - ಸ್ನೇಹಿತರ ಜೊತೆ ಹಂಚಿಕೊಳ್ಳುವ ಪ್ರತಿತಿ ಇದೆ. ಈ ಎಲೆಗಳನ್ನು ಎಲ್ಲಿ ಇಟ್ಟರೂ ಅಲ್ಲಿ ಹೊನ್ನಾಗುವುದು ಎನ್ನುತಾರೆ. ಮನೆಯಲ್ಲಿ ದುಡ್ಡು/ಆಭರಣ ಇಡುವ ಕಪಾಟಿನಲ್ಲಿ (locker/safe/bureau) ಎಲೆಗಳನ್ನು ಇಟ್ಟರೆ ಹೆಚ್ಚಿನ ಐಶ್ವರ್ಯ ಬರುತ್ತದೆ, ರೈತರು ಬನ್ನಿ ಎಲೆಗಳನ್ನು ತಮ್ಮ ಹೊಲ ಗದ್ದೆಗಳಿಗೆ ಹಾಕುತ್ತಾರೆ, ಇದರಿಂದ ಒಳ್ಳೆ ಬೆಳೆ ಬರುತ್ತದೆ ಎಂಬ ನಂಬಿಕೆ.

ವಿಜಯ ದಶಮಿಯ ಶುಭಕರವಾದ ದಿನ. ಯಾವುದೆ ಕೆಲಸ ಮಾಡಿದರು ಅದು ಯಶ್ವಿಯಾಗುವುದು ಎಂಬ ನಂಬಿಕೆ. ಹೀಗಾಗಿ ಈ ದಿನ ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹಪ್ರವೇಶ, ನಾಮಕರಣ ಮುಂತಾದ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಹೊಸ ವ್ಯಾಪರ ಶುರು, ಹೊಸ ವಾಹನ, ಆಸ್ತಿ ಖರೀದಿ ಮಾಡುತ್ತಾರೆ.

ನವರಾತ್ರಿಯ ಬಾಕಿ ದಿನಗಳಂತೆ ವಿಜಯ ದಶಮಿಯ ದಿನ ಗೊಂಬೆಗಳಿಗೆ, ದೇವರಿಗೆ ಪೂಜೆ ಮಾಡುತ್ತಾರೆ. ರಾತ್ರಿ ಮಲಗುವ ಮುನ್ನ ಗೊಂಬೆಗಳಿಗೆ ಪುನಃ ನಮಸ್ಕರಿಸಿ ಪಟ್ಟದ ಗೊಂಬೆಗಳನ್ನು ಮಲಗಿಸುತ್ತಾರೆ. ಮಾರನೆಯ ದಿನ ಗೊಂಬೆಗಳನ್ನು ವಿಸರ್ಜಿಸುತ್ತಾರೆ. ಅಲ್ಲಿಗೆ ನವರಾತ್ರಿಯ ಆಚರಣೆ ಮುಕ್ತಾಯವಾಯಿತು.


ಈ ವಿಜಯ ದಶಮಿಯು ನಿಮ್ಮ ಎಲ್ಲ ಕಾರ್ಯಗಳಲ್ಲಿ ವಿಜಯ ಕೊಡಲಿ ಹಾಗು ದೇವಿಯು ನಿಮ್ಮೆಲ್ಲರನ್ನು ಕಾಪಾಡಲಿ.

1 comment:

  1. ನಿಮಗೆಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು .

    ReplyDelete

Thank you for your valuable comments. I will try to reply back as soon as possible.

Blog Widget by LinkWithin