"ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು"
ನವರಾತ್ರಿ / ದಸರಾ ಹಬ್ಬ ಕರ್ನಾಟಕದ ಒಂದು ಮುಖ್ಯ ಹಬ್ಬ. ಇದನ್ನು ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರತಿಪದ್ (ಪಾಡ್ಯ) ಇಂದ ದಶಮಿವರಗೆ ಆಚರಿಸುತ್ತಾರೆ. ಇದನ್ನು ಶರದ್ ಋತುವಿನಲ್ಲಿ ಆಚರಿಸುವುದರಿಂದ ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ಗೊಂಬೆಗಳನ್ನು ಅಲಂಕಾರ ಮಾಡಿ ಸಜ್ಜಾಗಿ ಜೋಡಿಸುತ್ತಾರೆ. ಆದ್ದರಿಂದ ಇದಕ್ಕೆ ಗೊಂಬೆ/ಬೊಂಬೆ ಹಬ್ಬ ಎಂದೂ ಹೆಸರಿದೆ.
ನವರಾತ್ರಿ ಅಂದರೆ 9 ರಾತ್ರಿಗಳು. ಈ ಹತ್ತು ದಿನಗಳು ದೇವಿ/ಆದಿಶಕ್ತಿಯನ್ನು ದುರ್ಗಾ, ಸರಸ್ವತಿ, ಲಲಿತ, ಭವಾನಿ, ಲಕ್ಷ್ಮಿ, ಚಾಮುಂಡೇಶ್ವರಿ, ಚಂಡಿಕ, ಕಾಳಿ ಎಂದು ವಿವಿಧ ರೂಪದಲ್ಲಿ ಆರಾಧಿಸಿ ಪೂಜಿಸುತ್ತಾರೆ. ಇದರಲ್ಲಿ ವಿಶೇಷವಾದ ದಿನಗಳು:
ನವರಾತ್ರಿಯನ್ನು ಆಚರಿಸುವುದರ ಹಿಂದೆ ಹಲವು ಕಥೆಗಳಿವೆ.ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು , ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು ಎಂದು ನಂಬಿಕೆ ಇದೆ. ಪಾಂಡವರು ಒಂದು ವರ್ಷ ಅಜ್ನಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಶಮೀ/ ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ 1 ವರ್ಷ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕೌರವರನ್ನು ಯುದ್ಧದಲ್ಲಿ ಸೋಲಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ. ದಾನವ/ರಾಕ್ಷಸ/ದುಷ್ಟ ಶಕ್ತಿಯನ್ನು ದೇವಿ/ಶಿಷ್ಟ ಶಕ್ತಿ ನಾಶಗೊಳಿಸಿ ವಿಜಯವಾದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಾರೆ.
ಕನ್ನಡಿಗರಿಗೆ ದಸರಾ ಎಂದರೆ ಇನ್ನಷ್ಟು ಹೆಮ್ಮೆ, ಇದು ನಮ್ಮ ನಾಡಹಬ್ಬ.ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಹಾಡು ಇರುವಂತೆ ನಮ್ಮ ಮೈಸೂರಿನ ದಸರಾ ಹಬ್ಬದ ಆಚರಣೆ ಜಗತ್ತಿನಲ್ಲೇ ಪ್ರಸಿದ್ದ. ವೊಡೆಯರ ಮನೆತನ ರಾಜರು ದಸರಾ ಹಬ್ಬವನ್ನು ವಿಜ್ರಂಬಣೆ ಇಂದ ಆಚರಸುತ್ತ ಬಂದಿದ್ದಾರೆ. ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯ ಪೂಜೆಯಿಂದ ಪ್ರಾರಂಭ ಆಗುತ್ತೆ. ವಿಜಯದಶಮಿ ದಿನ ಚಾಮುಂಡಿ ದೇವಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ಆನೆಯ ಮೇಲೆ ಜಂಬೂ ಸವರಿ ಮಾಡುತ್ತಾರೆ. ದೊಡ್ಡ ಮೆರವಣಿಗೆ ಮಾಡಿ ಬನ್ನಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಮಾಡಿ ಕೊನೆಗೊಳ್ಳುತ್ತದೆ. ಈ ಹತ್ತು ದಿನ ಅರಮನೆಗೆ ದೀಪದಿಂದ ಅಲಂಕಾರ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ. ಒಟ್ಟಿನಲ್ಲಿ ಮೈಸೂರು ದಸರಾದ ವೈಭವ ನೋಡಿದವರಿಗೇ ನೋಡಿದವರಿಗೇ ಗೊತ್ತು:)
ಮೈಸೂರಿಗೆ ಹೋಗಿ ದಸರಾ ನೋಡುವ ಆಸೆ ಇದ್ದರೆ, Mysoredasara.org ಅಲ್ಲಿ ಹೆಚ್ಚಿನ ಮಾಹಿತಿ ಇದೆ.
ಪಾಡ್ಯದ ದಿನ ದೇವಿಯ ಪಟದ ಜೊತೆ ಪಟ್ಟದ ಗೊಂಬೆ ಹಾಗು ಇತರೆ ಗೊಂಬೆಗಳನ್ನು ಇಟ್ಟು ಪೂಜೆ ಮಾಡಬೇಕು. ಪ್ರತಿ ದಿನ ದೇವಿಯನ್ನು ಧ್ಯಾನ ಮಾಡಬೇಕು.ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜೆ ಮಾಡುವ ವಿಧಾನ ಇಲ್ಲಿದೆ.
ದೇವಿಯ ಹಾಡು/ ಸ್ತೋತ್ರಗಳು:
ಆದಿಶಕ್ತಿಯು ಎಲ್ಲರಿಗೂ ಮಂಗಳವನ್ನು ಮಾಡಲಿ :)