Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

April 21, 2008

Ugadi / Yugadi 2008 / ಯುಗಾದಿ ಹಬ್ಬ

"ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)"
ಹೊಸ ವರ್ಷ ಶುರು ಆಗುವುದು ಯುಗಾದಿ ಹಬ್ಬದೊಂದಿಗೆ . ಚೈತ್ರ ಮಾಸ ಪ್ರತಿಪತ್ ಅಥವಾ ಪಾಡ್ಯದ ದಿನ ಉಗಾದಿ ಹಬ್ಬ. " ಯುಗಾದಿ " ಯುಗದ ಆದಿ ಅಂದರೆ ಒಂದು ಹೊಸ ಕಾಲಮಾನದ ಆರಂಭ. ಯುಗಾದಿ ಹಬ್ಬದೊಂದಿಗೆ ಹೊಸ ವರ್ಷ ಶುರು ಆಗುತ್ತೆ. ಹೊಸ ಸಂವತ್ಸರದ ಮೊದಲನೆಯ ದಿನ. ದಿನ ಮನೆಯವರೆಲ್ಲ ಅಭ್ಯಂಜನ ಸ್ನಾನ ಮಾಡಿ, ಪೂಜೆ ಮಾಡುತ್ತಾರೆ. ಮನೆಯನ್ನು, ಮುಖ್ಯವಾಗಿ ದೇವರ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಮನೆಯ ಮುಂಬಾಗಿಲಿಗೆ ಮಾವಿನ ಎಲೆ ತೋರಣ, ಬೇವಿನ ಸೊಪ್ಪು ಕಟ್ಟುತ್ತಾರೆ, ರಂಗೋಲಿ ಹಾಕಿ , ಹೊಸ್ತಿಲು ಪೂಜೆ ಮಾಡುತ್ತಾರೆ. ದೇವರ ಮನೆಯಲ್ಲಿರುವ ಪಟಗಳು, ವಿಗ್ರಹಗಳು ಮತ್ತು ಇತರೆ ಪೂಜಾ ಸಾಮಾನುಗಳನ್ನು ತೊಳೆದು, ಬೆಳಗಿ, ಹೊಸದಾಗಿ, ಅಚ್ಚುಕಟ್ಟಾಗಿ ಮತ್ತೆ ಜೋಡಿಸುತ್ತಾರೆ . ರಂಗೋಲಿ, ಹೂವು, ತೋರಣದಿಂದ ಅಲಂಕಾರ.

ತೋರಣ, ರಂಗೋಲಿ, ಹೊಸ್ತಿಲು ಪೂಜೆ

ಮೊದಲು ಗಣಪತಿ ಪೂಜೆ, ನಂತರ ಮನೆ ದೇವರಿಗೆ ಪೂಜೆ ನಡೆಯುತ್ತದೆ. ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜಾವಿಧಾನ ಇಲ್ಲಿದೆ . ಹೊಸ ಪಂಚಾಂಗ ಇಟ್ಟು ಪೂಜೆ ಮಾಡುತ್ತಾರೆ. ಧೂಪ ದೀಪ , ಹೂವು ಹಾಲು-ಹಣ್ಣು , ಅರ್ಚನೆ , ನೈವೇದ್ಯ, ಮಂಗಳಾರತಿ, ದೇವರಿಗೆ ನಮಸ್ಕಾರದಿಂದ ಪೂಜೆ ಮುಕ್ತಾಯ . ಈ ದಿನದ ವಿಶೇಷ "ಬೇವು-ಬೆಲ್ಲ" .

ಬೇವು - ಬೆಲ್ಲ

ಬೇವು ಬೆಲ್ಲ ಅಂದರೆ ಸಿಹಿ - ಕಹಿ . ಇದು ನಮ್ಮ ಬಾಳಲ್ಲಿರುವ ಸಿಹಿ ಕಹಿ, ಸುಖ ದುಃಖಗಳ ಸಂಕೇತ. ಇದನ್ನು ತಿನ್ನುವಂತೆ ನಾವು ಬದುಕಿನ ಸುಖ ದುಃಖವನ್ನು ಸಮನಾಗಿ ಸ್ವೀಕರಿಸಬೇಕು. ಬೇವು-ಬೆಲ್ಲ ಮಾಡುವ ವಿಧಾನ ಹೀಗಿದೆ: 5/6 ಬೇವಿನ ಎಲೆ, ಬೇವಿನ ಹೂವು ಮತ್ತು 2 ಚಮಚ ಬೆಲ್ಲದ ತುರಿ ಜೊತೆಗೆ 4-6 ಹನಿ ತುಪ್ಪ ಹಾಕಿ ಚೆನ್ನಾಗಿ ಕಲೆಸಿ, ಒರಳು ಅಥವಾ ಕಲಬತ್ತು ಅಥವಾ ಕುಟ್ಟಾಣಿಯಲ್ಲಿ ಸ್ವಲ್ಪ ಅರೆದು ಮಿಶ್ರಣ ಮಾಡಿ (mash in mortar &pestle) .ಇದ್ಯಾವುದೂ ಇಲ್ಲದಿದ್ದರೆ ಕೈಯಲ್ಲಿ ಚೆನ್ನಾಗಿ ಹಿಸುಕಿ ಮಿಶ್ರಣ ಮಾಡಿ. ಈ ಬೇವು ಬೆಲ್ಲ ದೇವರ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಇದರ ಒಂದು ಸಣ್ಣ ತುಣುಕನ್ನು ಮನೆಯವರೆಲ್ಲ ತಿನ್ನಬೇಕು. "ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ " ಅಂತ ಹೇಳಿಕೊಂಡು ಗುಳುಂ ಮಾಡುವುದು. ನೂರು ವರ್ಷ ಆಯಸ್ಸು, ವಜ್ರದಂತ ದೇಹ , ಎಲ್ಲ ಸಂಪತ್ತು ಕೈಗೆ ಬರುವುದು, ಎಲ್ಲ ಕೆಡಕುಗಳ ವಿನಾಶ (ಅರಿಷ್ಟ - ಕೇಡು), ಈ ಬೇವು ಬೆಲ್ಲದಿಂದ ಇವೆಲ್ಲ ಸಿಗುತ್ತೆ ಎಂದರ್ಥ.

ಪೂಜೆಯ ನಂತರ ಮನೆಯ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು.ಬಂಧು-ಮಿತ್ರರಿಗೆ ಶುಭಾಷಯ ಹಾರೈಸುವುದು. ಈಗ ಫೋನ್ , ಈಮೈಲ್ ಮೂಲಕ ಶುಭಾಶಯ ಹೇಳ್ತೀವಿ.ಹಬ್ಬ ಎಂದರೆ ರುಚಿಯಾದ ಹಬ್ಬದ ಊಟ ಇರಲೇಬೇಕು ಅಲ್ಲವೇ.ಸಾಮಾನ್ಯವಾಗಿ ಯುಗಾದಿಗೆ ಸಿಹಿ ತಿಂಡಿ ಒಬ್ಬಟ್ಟು/ಹೋಳಿಗೆ ಮಾಡುತ್ತಾರೆ. ಬಗೆ ಬಗೆಯಾದ ಭಕ್ಷ್ಯಗಳನ್ನು ಆಸ್ವಾದಿಸಿದ ಮೇಲೆ ಹಬ್ಬ ಸಂಪೂರ್ಣವಾದ ಭಾವನೆ :)

ಹಬ್ಬದ ಅಡಿಗೆ, ಒಬ್ಬಟ್ಟು

ಬೆಳಗ್ಗೆ ಪಂಚಾಂಗದ ಪೂಜೆ ಆದ ಮೇಲೆ ಸಾಯಂಕಾಲ ಪಂಚಾಂಗ ಶ್ರವಣ ಕಾರ್ಯಕ್ರಮ. ಶ್ರವಣ ಅಂದರೆ ಕೇಳುವುದು. ಸಾಮಾನ್ಯವಾಗಿ ಮನೆಯ ಹಿರಿಯರು ಅಥವಾ ದೇವಸ್ಥಾನದ ಅರ್ಚಕರು ಪಂಚಾಂಗವನ್ನು ಓದುತ್ತಾರೆ, ಬೇರೆಯವರೆಲ್ಲ ಕೇಳಿಸಿಕೊಳ್ಳುತ್ತಾರೆ.

ಪಂಚಾಂಗ - ವರ್ಷದ ಕೈಪಿಡಿ

ಪಂಚಾಂಗ - ಪಂಚ ಅಂಗ ಅಂದರೆ 5 ಅಂಗಗಳಿವೆ. ವಾರ, ತಿಥಿ, ನಕ್ಷತ್ರ , ಯೋಗ, ಕರಣ. ವರ್ಷದ ಪ್ರತಿ ದಿನಕ್ಕೂ ಈ ಮಾಹಿತಿ ಕೊಟ್ಟಿರುತ್ತಾರೆ. ಪಂಚಾಂಗದಲ್ಲಿ ಬಹಳ ಮಾಹಿತಿಗಳಿವೆ. ಈ ವರ್ಷದ ಆದಾಯ-ವ್ಯಯ, ಮಳೆ-ಬೆಳೆ, ಸಂವತ್ಸರ ಫಲ, ಪ್ರತಿ ರಾಶಿಯ ಫಲ, ಮುಖ್ಯವಾದ ಹಬ್ಬ-ಹರಿದಿನಗಳು , ಸೂರ್ಯ/ಚಂದ್ರ ಗ್ರಹಣ, ಪುಣ್ಯಕ್ಷೇತ್ರಗಳ ರಥೋತ್ಸವಗಳ ವಿವರ - ಹೀಗೆ ಬೇಕಾದಷ್ಟು ಮಾಹಿತಿಗಳು ತಿಳಿಯುತ್ತೆ. ಪಂಚಾಂಗದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಈಗಿನ ದಿನಗಳಲ್ಲಿ TV ಅಲ್ಲಿ ಈ ವಿಚಾರಗಳು ಪ್ರಸಾರವಗುತ್ತೆ. ಪಂಚಾಂಗ ಶ್ರವಣ ಹೋಗಿ ಈಗ ದೂರದರ್ಶನ ಶ್ರವಣ ಆಗಿದೆ :) ಹೀಗೆ ಯುಗಾದಿ ಆಚರಿಸಿ ಹೊಸ ವರ್ಷದ ಸ್ವಾಗತ ನಡೆಯುತ್ತೆ.

ಯುಗಾದಿ ವಿಷಯ ಮಾತಾಡುವಾಗ ಎಲ್ಲರಿಗೂ ಗೊತ್ತಿರುವ ಜನಪ್ರಿಯ ಹಾಡನ್ನ ನೆನಪಿಸಿಕೊಳ್ಳಲೇ ಬೇಕು. ಸ್ನೇಹಿತರೇ ನಿಮ್ಮ ಉಹೆ ಸರಿಯಾಗಿದೆ. ಕವಿ ದ. ರಾ. ಬೇಂದ್ರೆ ಅವರ ಕವನವನ್ನು 'ಕುಲವಧು' ಚಲನಚಿತ್ರದಲ್ಲಿ ಎಸ್. ಜಾನಕಿ ಯವರು ಸುಮಧುರವಾಗಿ ಹಾಡಿದ್ದಾರೆ. ಈ ವೀಡಿಯೊ ಅನ್ನು youtube ಇಂದ satishakm ಅವರ ಸಂಗ್ರಹದಿಂದ ಆಯ್ದು ಕೊಂಡಿದ್ದೀನಿ. ಈ ಹಾಡನ್ನು ನೀವು ಕೇಳಿ, ನೋಡಿ, ಆನಂದಿಸಿ :)




ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ......


Related Link:


ಪಂಚಾಂಗದ ವಿವರ

5 comments:

  1. ಪೂಜಾ ವಿಧಾನ ಬ್ಲಾಗ್ ಬಹಳ ಮೆಚ್ಚುಗೆಯಾಯಿತು ಇದರಲ್ಲಿ ಎಲ್ಲ ಹಬ್ಬಗಳ ವಿವರಣೆ ಬಹಳ ಚೆನ್ನಾಗಿ ಮೂಡಿ ಬಂದಿದೆ ನೋಡಿ ತುಂಬಾ ಸಂತೋಷವಾಯಿತು . ಧನ್ಯವಾದಗಳು

    ReplyDelete
  2. @Pankaja
    ನಿಮ್ಮ ಮೆಚ್ಚುಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete
  3. thank u & we want more information in kannada language

    ReplyDelete

Thank you for your valuable comments. I will try to reply back as soon as possible.

Blog Widget by LinkWithin