ಬೇವು - ಬೆಲ್ಲ
ಬೇವು ಬೆಲ್ಲ ಅಂದರೆ ಸಿಹಿ - ಕಹಿ . ಇದು ನಮ್ಮ ಬಾಳಲ್ಲಿರುವ ಸಿಹಿ ಕಹಿ, ಸುಖ ದುಃಖಗಳ ಸಂಕೇತ. ಇದನ್ನು ತಿನ್ನುವಂತೆ ನಾವು ಬದುಕಿನ ಸುಖ ದುಃಖವನ್ನು ಸಮನಾಗಿ ಸ್ವೀಕರಿಸಬೇಕು. ಬೇವು-ಬೆಲ್ಲ ಮಾಡುವ ವಿಧಾನ ಹೀಗಿದೆ: 5/6 ಬೇವಿನ ಎಲೆ, ಬೇವಿನ ಹೂವು ಮತ್ತು 2 ಚಮಚ ಬೆಲ್ಲದ ತುರಿ ಜೊತೆಗೆ 4-6 ಹನಿ ತುಪ್ಪ ಹಾಕಿ ಚೆನ್ನಾಗಿ ಕಲೆಸಿ, ಒರಳು ಅಥವಾ ಕಲಬತ್ತು ಅಥವಾ ಕುಟ್ಟಾಣಿಯಲ್ಲಿ ಸ್ವಲ್ಪ ಅರೆದು ಮಿಶ್ರಣ ಮಾಡಿ (mash in mortar &pestle) .ಇದ್ಯಾವುದೂ ಇಲ್ಲದಿದ್ದರೆ ಕೈಯಲ್ಲಿ ಚೆನ್ನಾಗಿ ಹಿಸುಕಿ ಮಿಶ್ರಣ ಮಾಡಿ. ಈ ಬೇವು ಬೆಲ್ಲ ದೇವರ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಇದರ ಒಂದು ಸಣ್ಣ ತುಣುಕನ್ನು ಮನೆಯವರೆಲ್ಲ ತಿನ್ನಬೇಕು. "ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ " ಅಂತ ಹೇಳಿಕೊಂಡು ಗುಳುಂ ಮಾಡುವುದು. ನೂರು ವರ್ಷ ಆಯಸ್ಸು, ವಜ್ರದಂತ ದೇಹ , ಎಲ್ಲ ಸಂಪತ್ತು ಕೈಗೆ ಬರುವುದು, ಎಲ್ಲ ಕೆಡಕುಗಳ ವಿನಾಶ (ಅರಿಷ್ಟ - ಕೇಡು), ಈ ಬೇವು ಬೆಲ್ಲದಿಂದ ಇವೆಲ್ಲ ಸಿಗುತ್ತೆ ಎಂದರ್ಥ.
ಪೂಜೆಯ ನಂತರ ಮನೆಯ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು.ಬಂಧು-ಮಿತ್ರರಿಗೆ ಶುಭಾಷಯ ಹಾರೈಸುವುದು. ಈಗ ಫೋನ್ , ಈಮೈಲ್ ಮೂಲಕ ಶುಭಾಶಯ ಹೇಳ್ತೀವಿ.ಹಬ್ಬ ಎಂದರೆ ರುಚಿಯಾದ ಹಬ್ಬದ ಊಟ ಇರಲೇಬೇಕು ಅಲ್ಲವೇ.ಸಾಮಾನ್ಯವಾಗಿ ಯುಗಾದಿಗೆ ಸಿಹಿ ತಿಂಡಿ ಒಬ್ಬಟ್ಟು/ಹೋಳಿಗೆ ಮಾಡುತ್ತಾರೆ. ಬಗೆ ಬಗೆಯಾದ ಭಕ್ಷ್ಯಗಳನ್ನು ಆಸ್ವಾದಿಸಿದ ಮೇಲೆ ಹಬ್ಬ ಸಂಪೂರ್ಣವಾದ ಭಾವನೆ :)
ಹಬ್ಬದ ಅಡಿಗೆ, ಒಬ್ಬಟ್ಟು
ಬೆಳಗ್ಗೆ ಪಂಚಾಂಗದ ಪೂಜೆ ಆದ ಮೇಲೆ ಸಾಯಂಕಾಲ ಪಂಚಾಂಗ ಶ್ರವಣ ಕಾರ್ಯಕ್ರಮ. ಶ್ರವಣ ಅಂದರೆ ಕೇಳುವುದು. ಸಾಮಾನ್ಯವಾಗಿ ಮನೆಯ ಹಿರಿಯರು ಅಥವಾ ದೇವಸ್ಥಾನದ ಅರ್ಚಕರು ಪಂಚಾಂಗವನ್ನು ಓದುತ್ತಾರೆ, ಬೇರೆಯವರೆಲ್ಲ ಕೇಳಿಸಿಕೊಳ್ಳುತ್ತಾರೆ.
ಪಂಚಾಂಗ - ವರ್ಷದ ಕೈಪಿಡಿ
ಪಂಚಾಂಗ - ಪಂಚ ಅಂಗ ಅಂದರೆ 5 ಅಂಗಗಳಿವೆ. ವಾರ, ತಿಥಿ, ನಕ್ಷತ್ರ , ಯೋಗ, ಕರಣ. ವರ್ಷದ ಪ್ರತಿ ದಿನಕ್ಕೂ ಈ ಮಾಹಿತಿ ಕೊಟ್ಟಿರುತ್ತಾರೆ. ಪಂಚಾಂಗದಲ್ಲಿ ಬಹಳ ಮಾಹಿತಿಗಳಿವೆ. ಈ ವರ್ಷದ ಆದಾಯ-ವ್ಯಯ, ಮಳೆ-ಬೆಳೆ, ಸಂವತ್ಸರ ಫಲ, ಪ್ರತಿ ರಾಶಿಯ ಫಲ, ಮುಖ್ಯವಾದ ಹಬ್ಬ-ಹರಿದಿನಗಳು , ಸೂರ್ಯ/ಚಂದ್ರ ಗ್ರಹಣ, ಪುಣ್ಯಕ್ಷೇತ್ರಗಳ ರಥೋತ್ಸವಗಳ ವಿವರ - ಹೀಗೆ ಬೇಕಾದಷ್ಟು ಮಾಹಿತಿಗಳು ತಿಳಿಯುತ್ತೆ. ಪಂಚಾಂಗದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಈಗಿನ ದಿನಗಳಲ್ಲಿ TV ಅಲ್ಲಿ ಈ ವಿಚಾರಗಳು ಪ್ರಸಾರವಗುತ್ತೆ. ಪಂಚಾಂಗ ಶ್ರವಣ ಹೋಗಿ ಈಗ ದೂರದರ್ಶನ ಶ್ರವಣ ಆಗಿದೆ :) ಹೀಗೆ ಯುಗಾದಿ ಆಚರಿಸಿ ಹೊಸ ವರ್ಷದ ಸ್ವಾಗತ ನಡೆಯುತ್ತೆ.
ಯುಗಾದಿ ವಿಷಯ ಮಾತಾಡುವಾಗ ಎಲ್ಲರಿಗೂ ಗೊತ್ತಿರುವ ಜನಪ್ರಿಯ ಹಾಡನ್ನ ನೆನಪಿಸಿಕೊಳ್ಳಲೇ ಬೇಕು. ಸ್ನೇಹಿತರೇ ನಿಮ್ಮ ಉಹೆ ಸರಿಯಾಗಿದೆ. ಕವಿ ದ. ರಾ. ಬೇಂದ್ರೆ ಅವರ ಕವನವನ್ನು 'ಕುಲವಧು' ಚಲನಚಿತ್ರದಲ್ಲಿ ಎಸ್. ಜಾನಕಿ ಯವರು ಸುಮಧುರವಾಗಿ ಹಾಡಿದ್ದಾರೆ. ಈ ವೀಡಿಯೊ ಅನ್ನು youtube ಇಂದ satishakm ಅವರ ಸಂಗ್ರಹದಿಂದ ಆಯ್ದು ಕೊಂಡಿದ್ದೀನಿ. ಈ ಹಾಡನ್ನು ನೀವು ಕೇಳಿ, ನೋಡಿ, ಆನಂದಿಸಿ :)
Related Link:
ಪಂಚಾಂಗದ ವಿವರ